ಮಂಗಳೂರು: ವಿಧಾನಸಭಾ ಅಖಾಡದಲ್ಲಿ ರಾಜಕೀಯ ಪಕ್ಷಗಳ ಜಂಘೀಕುಸ್ತಿ ಆರಂಭವಾಗಿದ್ದು ನಾಯಕರ ಮೇಲಾಟಕ್ಕೂ ರಣಾಂಗಣ ಸಾಕ್ಷಿಯಾಗುತ್ತಿವೆ. ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿ ಪ್ರಾಬಲ್ಯದ ಕ್ಷೇತ್ರಗಳಿಗೆ ಲಗ್ಗೆಯಿಡಲು ಕಾಂಗ್ರೆಸ್ ಹರಸಾಹಸ ನಡೆಸುತ್ತಿದೆ. ಆದರೆ ಟಿಕೆಟ್ ಆಕಾಂಕ್ಷಿಗಳ ತೆರೆಮರೆಯ ಲಾಭಿಯಿಂದಾಗಿ ಕೈ ಪಕ್ಷಕ್ಕೆ ಹಿನ್ನಡೆಯಾಗುವ ಆತಂಕ ಎದುರಾಗಿದೆ.
ಬಿಜೆಪಿ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ‘ಸುರತ್ಕಲ್’ ಖ್ಯಾತಿಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ವಿರೋಧಿ ಅಲೆ ಇರುವುದಂತೂ ಸ್ಪಷ್ಟ. ಹಾಗಾಗಿಯೇ ಕಮಲ ಪಾಳಯದಲ್ಲಿ ತಳಮಳ ಉಂಟಾಗಿದ್ದು ರಾಜಕೀಯ ಎದುರಾಳಿಗಳನ್ನು ಕಟ್ಟಿಹಾಕುವ ಬಗ್ಗೆ ರಣವ್ಯೂಹಕ್ಕೆ ಒತ್ತು ನೀಡುವಂತಾಗಿದೆ.
ಪುತ್ತೂರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹಾಗೂ ಅಶೋಕ್ ರೈ ಅವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದು ಈ ನಾಯಕರ ಗುಂಪುಗಳ ನಡುವೆ ಒಮ್ಮತ ಮೂಡಿಸುವುದು ಕೈ ನಾಯಕರಿಗೆ ಸವಾಲಾಗಿದೆ. ಇನ್ನೊಂದೆಡೆ ಮಂಗಳೂರು ಉತ್ತರದಲ್ಲಿ ಮಾಜಿ ಶಾಸಕ ಮೊಯ್ದಿನ್ ಬಾವ ಹಾಗೂ ಉದ್ಯಮಿ ಇನಾಯತ್ ಆಲಿ ನಡುವೆ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿದ್ದು, ಕೈ ಪಾಳಯದಲ್ಲೇ ಹೈವೋಲ್ಟೇಜ್ ಬೆಳವಣಿಗೆಗಳು ನಡೆಯುತ್ತಿದೆ.
ಬಾವ Vs ಆಲಿ
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಮತಗಳೂ ನಿರ್ಣಾಯಕ. ಹಾಗಾಗಿ ಕಾಂಗ್ರೆಸ್ ಪಕ್ಷವು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪ್ರಯತ್ನಿಸುತ್ತಿದೆ. ಆದರೆ ಈ ಕ್ಷೇತ್ರದಲ್ಲಿ ತಾನೇ ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಾ ಇನಾಯತ್ ಆಲಿ ಅವರು ಈಗಾಗಲೇ ನಡೆಸುತ್ತಿದ್ದಾರೆ. ಇದೇ ವೇಳೆ ಟಿಕೆಟ್‌ಗಾಗಿ ಲಾಭಿ ನಡೆಸುತ್ತಿರುವ ಮೊಯ್ದಿನ್ ಬಾವಾ ಅವರೂ ಭಾರೀ ಕಸರತ್ತಿನಲ್ಲಿ ನಿರತರಾಗಿದ್ದಾರೆ.
ಪ್ರಸ್ತುತ, ಪ್ರಚಾರ ಕೈಗೊಳ್ಳುತ್ತಿರುವ ಇನಾಯತ್ ಆಲಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪರಮಾಪ್ತರಲ್ಲೊಬ್ಬ. ಹಾಗಾಗಿ ಇವರಿಗೆ ಟಿಕೆಟ್ ನೀಡುವ ಬಗ್ಗೆ ಡಿಕೆಶಿ ಕಡೆಯಿಂದಲೂ ಅಭಯ ಸಿಕ್ಕಿದೆಯಂತೆ. ಇವರು ಬಿಜೆಪಿಯ ನಳಿನ್ ಕುಮಾರ್ ಅವರ ಆಪ್ತರೂ ಹೌದು, ಬಿಎಸ್‌ವೈ ಪುತ್ರ ವಿಜಯೇಂದ್ರರ ಜೊತೆಗೂ ಆಪ್ತತೆ ಹೊಂದಿರುವವರು ಎಂಬ ಮಾತುಗಳೂ ಕೇಳಿಬರುತ್ತಿವೆ.
ಬಾವಾ ಬಂಡಾಯ ಖಚಿತ..?
ಸರ್ವಪಕ್ಷ ನಾಯಕರ ಕೃಪೆಯಿದಾಗಿ ಇನಾಯತ್ ಆಲಿಗೆ ಕೈ ಟಿಕೆಟ್ ಸಿಕ್ಕಿದ್ದೇ ಆದಲ್ಲಿ ಮೊಯ್ದಿನ್ ಬಾವಾ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗುತ್ತಿದೆ.
ಇನಾಯತ್ ಆಲಿ ಅವರು ದುಡ್ಡಿನ ವಿಚಾರದಲ್ಲಿ ಪ್ರಾಬಲ್ಯ ಹೊಂದಿದ್ದರೆ, ಮತಗಳ ಗಳಿಕೆ ಸಾಮರ್ಥ್ಯದಲ್ಲಿ ಮೊಯ್ದಿನ್ ಬಾವಾ ಅವರೇ ಕಲಿ. ಇನಾಯತ್ ಆಲಿ ಅವರು ಉದ್ಯಮಿಯಾಗಿ ಬಿಜೆಪಿ ನಾಯಕರ ಜೊತೆ ನಂಟು ಹೊಂದಿದ್ದಾರೆ ಎಂಬ ಬೇಸರ ಕಾಂಗ್ರೆಸ್ ಕಾರ್ಯಕರ್ತರಿಗೆ ಇದೆ. ಇದೇ ವೇಳೆ, ಮೊಯ್ದಿನ್ ಬಾವಾ ಅವರು ಶಾಸಕರಾಗಿದ್ದಾಗಲೂ ಉತ್ತಮ ಕೆಲಸ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋತರೂ ಕೂಡಾ ಜನರ ಸಂಕಷ್ಟಗಳಿಗೆ ಸ್ಪಂಧಿಸುತ್ತಿರುವವರು ಎಂಬ ಅನುಕಂಪ ಕ್ಷೇತ್ರದ ಜನರಲ್ಲಿದೆ. ಈ ಕಾರಣಗಳಿಂದಾಗಿ ಮೊಯ್ದಿನ್ ಬಾವಾ ಅವರು ಸ್ವತಂತ್ರವಾಗಿ ಸ್ಪರ್ಧಿಸಿದರೂ ಸಾಕಷ್ಟು ಮತಗಳನ್ಬು ಗಳಿಸಬಹುದೆಂಬುದು ಸ್ಥಳೀಯರ ರಾಜಕೀಯ ಲೆಕ್ಕಾಚಾರ.
ಈ ಕಾರಣದಿಂದಲೇ ತನಗೆ ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಮೊಯ್ದಿನ್ ಬಾವಾ ಅವರು ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಆಪ್ತ ಬಳಗದಲ್ಲಿ ಹೇಳಿಕೊಂಡಿದ್ದಾರೆನ್ನಲಾಗಿದೆ. ಒಂದು ವೇಳೆ, ಮೊಯ್ದಿನ್ ಭಾವಾ ಅವರು ಸ್ವತಂತ್ರವಾಗಿ ಕಣಕ್ಕಿಳಿದಿದ್ದೇ ಆದಲ್ಲಿ ಪರಿಸ್ಥಿತಿಯು ಬಿಜೆಪಿಗೆ ವರದಾನವಾಗುವುದಂತೂ ಖಚಿತ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ