ಮಂಗಳೂರು: ಮಳೆ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ನಿರ್ಲಕ್ಷದಿಂದ ಆಟೋ ರಿಕ್ಷಾ ಚಾಲಕ ದೀಪಕ್ ಎಂಬವರು ಸಾವನ್ನಪ್ಪಿದ್ದು, ಇದಕ್ಕೆ ಹೊಣೆಗಾರರಾಗಿರುವ ಪಾಲಿಕೆ ಮೇಯರ್, ಕಾರ್ಪೊರೇಟರ್ ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು NSUI ಮಂಗಳೂರು ನಗರ ದಕ್ಷಿಣ ಸಮಿತಿ ಅಧ್ಯಕ್ಷ ಕ್ರಿಸ್ಟನ್ ಮಿನೇಜಸ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಕ್ರಿಸ್ಟನ್ ಮಿನೇಜಸ್ ಅವರು ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು, ಸ್ಥಳೀಯ ಕಾರ್ಪೊರೇಟರ್ ಸಹಿತ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸಿ ತಬಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ದೂರಿನಲ್ಲಿ ಏನಿದೆ?
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ 17ರ ಕೊಟ್ಟಾರ ಪ್ರದೇಶದ ಅಬ್ಬಕ್ಕ ನಗರದಲ್ಲಿ ದಿನಾಂಕ 25.05.2024 ರಂದು ರಾತ್ರಿ 12:30 am ಸುಮಾರಿಗೆ ಬಾರೀ ಮಳೆ ಸಂದರ್ಭದಲ್ಲಿ ಒಳಚರಂಡಿ ಹಾಗೂ ರಸ್ತೆಯಲಿ ಮಳೆನೀರು ತುಂಬಿದ ಕಾರಣ ಅಪಘಾತದಲ್ಲಿ ಸಿಲುಕಿ ಆಟೋ ರಿಕ್ಷಾ ಚಾಲಕರಾದ ದೀಪಕ್ ರವರು (40) ಮೃತಪಟ್ಟಿದ್ದಾರೆ. ವಾಹನವು ಮಳೆ ನೀರಿನಲ್ಲಿ ಕೊಚ್ಸಿ ಹೋಗಿರುವುದರಿಂದ ಬಡಪಾಯಿ ವ್ಯಕ್ತಿಯ ಜೀವಕ್ಕೆ ಹಾನಿಯಾಗಿದ್ದು, ಅವರನ್ನೇ ಅವಲಂಬಿಸಿರುವ ಕುಟುಂಬ ಅತಂತ್ರವಾಗಿದೆ.
ಈ ಅನಾಹುತಕ್ಕೆ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಮಹಾಪೌರ ಸುಧೀರ್ ಶೆಟ್ಟಿ ಕಣ್ಣೂರು, ವಾರ್ಡ್ 17ರ ಪಾಲಿಕೆ ಸದಸ್ಯ ಮನೋಜ್ ಕುಮಾರ್ ಹಾಗೂ ಸೇರಿ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳ ನಿರ್ಲಕ್ಸ್ಯದಿಂದಲೇ ಒಂದು ಅಮೂಲ್ಯವಾದ ಜೀವ ಕಳೆದುಹೋಗಿದೆ ಎಂದು ಮಿನೇಜಸ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ
ಜನರು ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣದಿಂದಲೇ ತೆರಿಗೆ ಕಟ್ಟಿದ್ದು, ಆ ಹಣದಿಂದ ಅಭಿವೃದ್ಧಿ ಕೆಲಸ ಮಾಡಬೇಕಿದ್ದು, ಸಮರ್ಪಕ ಕೆಲಸ ನಡೆದಿಲ್ಲ. ಭ್ರಷ್ಟಾಚಾರದ ಕಾರಣದಿಂದಾಗಿ ಅಭಿವೃದ್ಧಿ ಕಾಮಗಾರಿಗಳೂ ಸಮರ್ಪಕವಾಗಿ ನಡೆಯದೆ ಜನಸಾಮಾನ್ಯರಿಗೆ ಅನ್ಯಾಯವಾಗಿದೆ. ಈ ನಿರ್ಲಕ್ಷ್ಯದ ಪರಿಣಾಮದಿಂದಾಗಿಯೇ ಆಟೋ ರಿಕ್ಷಾ ಚಾಲಕ ದೀಪಕ್ ರವರು ದುರ್ಮರಣಕ್ಕೀಡಾಗಿದ್ದಾರೆ ಎಂದವರು ದೂರಿದ್ದಾರೆ.
ಮಂಗಳೂರು ನಗರದ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ ವೈಫಲ್ಯಕ್ಕೆ ಬಲಿಯಾಗಿರುವ ಆಟೋ ಚಾಲಕ ದೀಪಕ್ ಅವರ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಕೆಲಸ ಕೊಡಿಸಬೇಕೆಂದು ಕ್ರಿಸ್ಟನ್ ಮಿನೇಜಸ್ ಅವರು ಸಿಎಂಗೆ ಮನವಿ ಮಾಡಿದ್ದಾರೆ.































































