ಮಂಗಳೂರು : ಅನಾದಿ ಕಾಲದಿಂದಲೂ ಮನುಷ್ಯನಿಗೆ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವಿದೆ. ಇಂದು ಪ್ರಕೃತಿಯ ಅಸಮತೋಲನ, ಮಾನವ ನಿರ್ಮಿತ ಕೆಲವು ತಪ್ಪುಗಳಿಂದ ಇಂದು ಕೆಲವು ಪಕ್ಷಿ ಸಂಕುಲ ವಿನಾಶದ ಅಂಚಿನಲ್ಲಿದೆ. ಬೇಸಿಗೆಯ ತಾಪಮಾನದಲ್ಲಿ ಪ್ರಾಣಿ, ಪಕ್ಷಿಗಳು ನೀರಿಲ್ಲದೆ ಕಂಗೆಡುವ ಸ್ಥಿತಿ ಇದೆ. ಪರಿಸರದ ಜತೆಗೆ ಪ್ರಾಣಿ, ಪಕ್ಷಿಗಳ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಹೇಳಿದ್ದಾರೆ.
ಮಂಗಳೂರು ವಿ.ವಿ. ಯೂತ್ ರೆಡ್‌ಕ್ರಾಸ್ ಮತ್ತು ಪರಿಸರ ಅಧ್ಯಯನ ಕೇಂದ್ರ ನೆಲ್ಲಿಗುಡ್ಡೆ ಇವುಗಳ ವತಿಯಿಂದ ಹಕ್ಕಿಗಳಿಗೆ ನೀರುಣಿಸಲು ಸಿಮೆಂಟ್ ಬೋಗುಣಿಯನ್ನು ಜಿಲ್ಲಾಧಿಕಾರಿ ನಿವಾಸದ ಆವರಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ವಿತರಿಸಿದ ಅವರು, ಭವಿಷ್ಯದ ರೂವಾರಿಗಳಾದ ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಅರಿವು ಮೂಡಿಸಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯಕ್ಕೆ ಮುಂದಾಗಿರುವುದು ಮಾದರಿ ಸೇವೆಯಾಗಿದೆ ಎಂದರು.
ವಿದ್ಯಾರ್ಥಿಗಳು ಹಾಗೂ ಯುವ ಸಂಘಟನೆಗಳು ಇದನ್ನು ಆಂದೋಲನದ ಮಾದರಿಯಲ್ಲಿ ಜಿಲ್ಲೆಯ ಎಲ್ಲೆಡೆ ಹಮ್ಮಿಕೊಳ್ಳಬೇಕು. ತನ್ಮೂಲಕ ಪ್ರಾಣಿ, ಪಕ್ಷಿಗಳನ್ನು ಪ್ರೀತಿಸುವ ವಾತಾವರಣ ನಿರ್ಮಾಣವಾಗಬೇಕು ಎಂದವರು ಪ್ರತಿಪಾದಿಸಿದರು.
ಅನಘ ರಿಫೈನರಿಯ ವ್ಯವಸ್ಥಾಪಕ ನಿರ್ದೇಶಕ ಸಾಂಬಶಿವ ರಾವ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ, ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ನಿರ್ದೇಶಕರಾದ ಪಿ.ಬಿ.ಹರೀಶ್ ರೈ, ರವೀಂದ್ರನಾಥ ಉಚ್ಚಿಲ, ಮಂಗಳೂರು ವಿ.ವಿ. ಯೂತ್ ರೆಡ್‌ಕ್ರಾಸ್ ಸಂಯೋಜನಾಧಿಕಾರಿ ಡಾ.ಗಣಪತಿ ಗೌಡ, ಬ್ಯಾಂಕ್ ಅಫ್ ಬರೋಡಾದ ಮುಖ್ಯ ಪ್ರಬಂಧಕ ಸತೀಶ್ ಪಾಟ್ಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಂಗಳೂರು ವಿ.ವಿ.ಕಾಲೇಜು ಮತ್ತು ತೃಷಾ ಕಾಲೇಜಿನ ಯೂತ್ ರೆಡ್‌ಕ್ರಾಸ್ ಸದಸ್ಯರು ಉಪಸ್ಥಿತರಿದ್ದರು. ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.