ದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆ ರಾಜಕೀಯ ಜಂಘೀಕುಸ್ತಿಯ ಅಖಾಡವೆನಿಸಿದ್ದು ಬಿಜೆಪಿ ಭದ್ರಕೋಟೆಯೆನಿಸಿರುವ ಕರಾವಳಿ ಜಲ್ಲೆಗಳಲ್ಲಿ ಕಮಾಲ್ ಪ್ರದರ್ಶಿಸಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ. ಜಾತಿ ಲೆಕ್ಕಾಚಾರದಲ್ಲಿ ಟಿಕೆಟ್ ಹಂಚಿಕೆ ಮಾಡಲು ತೀರ್ಮಾನಿಸಿರುವ ಕೈ ವರಿಷ್ಠರು ಸೂಕ್ತ ಅಭ್ಯರ್ಥಿಗಳಿಗಾಗಿ ಆಯ್ಕೆ ಕಸರತ್ತನ್ನು ವಿರುಸುಗೊಳಿಸಿದ್ದಾರೆ. ಈ ನಡುವೆ ಬಿಲ್ಲವ ಸಮುದಾಯದ ಮುಖಂಡ ಆರ್.ಪದ್ಮರಾಜ್ ಅವರನ್ನು ಕಾಂಗ್ರೆಸ್ ವರಿಷ್ಠರು ದಿಲ್ಲಿಗೆ ಬರುವಂತೆ ಬುಲಾವ್ ನೀಡಿರುವ ಬೆಳವಣಿಗೆ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರವಾಗಿದೆ.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಕಟ್ಟಿಹಾಕುವ ಸಂಬಂಧ ಬಿಲ್ಲವರಿಗೆ ಈ ಬಾರಿ ಟಿಕೆಟ್ ನೀಡುವ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಿದೆ. ಈ ಪೈಕಿ ಕುದ್ರೋಳಿ ಗೋಕರ್ಣನಾಥೇಶ್ವರ ದೇಗುಲದ ಖಜಾಂಚಿ ಆರ್.ಪದ್ಮರಾಜ್ ಹೆಸರು ಮುಂಚೂಣಿಯಲ್ಲಿದೆ.
ಈ ಕ್ಷೇತ್ರದಲ್ಲಿ ಸುಮಾರು 63,000 ಬಿಲ್ಲವ ಮತದಾರರೇ ಪ್ರಾಬಲ್ಯ. ಆದರೂ ಮಾಜಿ ಶಾಸಕರಾದ ಜೆ.ಆರ್.ಲೋಬೋ ಹಾಗೂ ಐವಾನ್ ಡಿಸೋಜ ಟಿಕೆಟ್ಗಾಗಿ ಭಾರೀ ಲಾಭಿ ನಡೆಸಿದ್ದರು. ಆದರೆ, ಕ್ರಿಶ್ಚಿಯನ್ ಸಮುದಾಯಕ್ಕೆ ಟಿಕೆಟ್ ನೀಟಿದರೆ ಇತರೆ ಸಮುದಾಯದ ಮತಗಳು ಬಿಜೆಪಿಗೆ ಹಂಚಿಕೆಯಾಗುವುದನ್ನು ತಡೆಯುವುದು ಅಸಾಧ್ಯ. ಹೇಗಿದ್ದರೂ ಕ್ರಿಶ್ಚಿಯನ್ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಸಿಗಲಿದ್ದು, ಅತೀಹೆಚ್ಚು ಮತದಾರರಿರುವ ಬಿಲ್ಲವ ಸಮುದಾಯದವರಿಗೆ ಟಿಕೆಟ್ ನೀಡಿದರೆ, ಆ ಸಮುದಾಯದ ಮತಗಳು ನಿರ್ಣಾಯಕವಾಗಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ನಾಯಕರದ್ದು.
ಮಂಗಳೂರು (ದಕ್ಷಿಣ) ಜಾತಿವಾರು ಮತಾದರರ ಸಂಖ್ಯೆ:
- ಒಟ್ಟು 2:4 ಲಕ್ಷ
- ಬಿಲ್ಲವ – 63,೦೦೦
- ಕ್ರಿಶ್ಚಿಯನ್ – 45,0೦೦
- ಮುಸ್ಲಿಂ – 30೦೦೦
- GSB/ಬ್ರಾಹ್ಮಣ- 45,೦೦೦
- ಬಂಟ್ಸ್ – 30,೦೦0
- ಪರಿಶಿಷ್ಟ ಜಾತಿ/ಪಂಗಡ- 25,000
- ಇತರರು – 36೦೦೦
ಈ ನಡುವೆ, ಆರ್.ಪದ್ಮರಾಜ್ ಅವರಿಗೆ ಮಂಗಳೂರು ದಕ್ಷಿಣದ ಟಿಕೆಟ್ ಸಿಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲೇ ಪದ್ಮರಾಜ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ದಿಲ್ಲಿಗೆ ಬರುವಂತೆ ಬುಲಾವ್ ನೀಡಿರುವ ಬೆಳವಣಿಗೆ ಕೈ ಪಾಳಯದಲ್ಲಿನ ಬೆಳವಣಿಗೆಗಳಿಗೆ ರೋಚಕತೆ ತುಂಬಿದೆ.