ಚಿತ್ರ-ವರದಿ: ಮಂಜು ನೀರೇಶ್ವಾಲ್ಯ
ಮಂಗಳೂರು: ಕರಾವಳಿಯ ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಇತಿಹಾಸ ಪ್ರಸಿದ್ಧ ಮಂಗಳೂರು ರಥೋತ್ಸವಕ್ಕೆ ಪ್ರಕ್ರಿಯೆ ಆರಂಭವಾಗಿದೆ.
ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಈ ಮಹಾವೈಭವ ಪ್ರಯುಕ್ತ ದೇಗುಲದಲ್ಲಿ ಸೋಮವಾರ ಧ್ವಜಾರೋಹಣ ಆಸ್ತಿಕರ ಗಮನಸೆಳೆಯಿತು. ಧ್ವಜಾರೋಹಣ ಮೂಲಕ ವಿದ್ಯುಕ್ತವಾಗಿ ಕೈಂಕರ್ಯಗಳು ಪ್ರಾರಂಭವಾಯಿತು.
ಐದು ದಿನಗಳ ಪರ್ಯಂತ ಮಹೋತ್ಸವ ನೆರವೇರಲಿದ್ದು, ಲಕ್ಷಾಂತರ ಭಜಕರು ಪಾಲ್ಗೊಳ್ಳಲಿದ್ದಾರೆ. ದಿನನಿತ್ಯ ರಾತ್ರಿ ವಿಶೇಷ ಉತ್ಸವಗಳು ನಡೆಯಲಿದೆ. ಫೆಬ್ರವರಿ 16ರಂದು ಬ್ರಹ್ಮರಥೋತ್ಸವ ನಡೆಯಲಿದೆ .
ರಥೋತ್ಸವ ಪ್ರಯುಕ್ತ ಬೆಳಿಗ್ಗೆ ಮಹಾ ಪ್ರಾರ್ಥನೆಯಲ್ಲಿ ಧಾರ್ಮಿಕ ಮುಖಂಡರು ಭಾಗಿಯಾಗಿದ್ದರು. ಬಳಿಕ ಯಜ್ಞದಲ್ಲಿ ಲಘು ಪೂರ್ಣಾಹುತಿ, ಧ್ವಜಾರೋಹಣ ನೆರವೇರಿತು. ಸಮಾರಾಧನೆಯಲ್ಲೂ ಭಾರೀ ಸಂಖ್ಯೆಯಲ್ಲಿ ಭಕ್ತರು ಭಾಗಿಯಾದರು. ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಆಗಮನ ಬಳಿಕ ರಾತ್ರಿ ಪೂಜೆ ನೆರವೇರಿತು.