ಮಂಗಳೂರು: ಕರಾವಳಿಯಲ್ಲಿ ಬಿಜೆಪಿ ಭದ್ರಕೋಟೆಗೆ ಲಗ್ಗೆ ಹಾಕುವ ಕಾಂಗ್ರೆಸ್ ಪ್ರಯತ್ನ ಮುಂದುವರಿದಿದೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಭರತ್ ಶೆಟ್ಟಿ ಗೆಲುವಿಗೆ ಕಡಿವಾಣ ಹಾಕಿ ಕೈ ವಶಮಾಡಿಕೊಳ್ಳಲು ಕಾಂಗ್ರೆಸ್ ನಾಯಕರು ಎಂದಿಲ್ಲದ ಕಸರತ್ತಿನಲ್ಲಿ ತೊಡಗಿದ್ದಾರೆ. ಮುಸ್ಲಿಂ ಮತ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಜಿ.ಎ.ಬಾವಾ ಅವರೂ ಮತಬೇಟೆಯಲ್ಲಿ ತೊಡಗಿದ್ದಾರೆ.
ಸುರತ್ಕಲ್ ಎಂದೇ ಗುರುತಾಗಿರುವ ಮಂಗಳೂರು ಉತ್ತರ ಕ್ಷೇತ್ರದಲ್ಲೀಗ ಉದ್ಯಮಿ ಇನಾಯತ್ ಆಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಟಿಕೆಟ್ ವಿಚಾರದಲ್ಲಿ ಬಂಡಾಯವೆದ್ದಿದ್ದ ಮಾಜಿ ಕಾಂಗ್ರೆಸ್ ಶಾಸಕ ಮೊಹಿಯುದ್ದೀನ್ ಬಾವಾ ಅವರು ಇದೀಗ ಜೆಡಿಎಸ್ ಹುರಿಯಾಳಾಗಿ ಕಾಂಗ್ರೆಸ್ ಪಕ್ಷಕ್ಕೆ ಎದುರಾಳಿಯಾಗಿದ್ದಾರೆ. ಈ ಬೆಳವಣಿಗೆಯೇ ಕಾಂಗ್ರೆಸ್ ಪಕ್ಷಕ್ಕೆ ಸವಾಲಾಗಿರುವುದು. ಆವರೆಗೂ ಬಿಜೆಪಿಯೊಳಗಿನ ಅಸಮಾಧಾನದ ಲಾಭ ಪಡೆಯಲು ಕಾಂಗ್ರೆಸ್ ನಡೆಸಿದ್ದ ಪ್ರಯತ್ನಕ್ಕೆ ಕೈ ನಾಯಕರ ಬಂಡಾಯವೇ ಅಡ್ಡಿಯಾಗಿದೆ. ಈ ಗೊಂದಲ ಬಗೆಹರಿಸಲು ಜಿ.ಎ.ಬಾವಾ ತಂಡ ಹರಸಾಹಸ ನಡೆಸಿದೆ.
ಈ ನಡುವೆ ಮುಸ್ಲಿಂ ಮತಗಳು ಚದುರಿ ಹೋಗದಂತೆ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ ನೇತೃತ್ವದ ಕಾಂಗ್ರೆಸ್ ನಾಯಕರ ಒಂದು ಗುಂಪು ಪ್ರಯತ್ನ ನಡೆಸಿದೆ. ತಮ್ಮ ಪಕ್ಷದ ಅಭ್ಯರ್ಥಿ ಇನಾಯತ್ ಆಲಿ ಗೆಲುವಿಗಾಗಿ ರಹಸ್ಯ ತಂತ್ರ ರೂಪಿಸಿದೆ. ಕ್ಷೇತ್ರದ ಬಹುತೇಕ ಮುಸ್ಲಿಂ ನಾಯಕರೊಂದಿಗೆ ಮತುಕತೆ ನಡೆಸಿರುವ ಜಿ.ಎ.ಬಾವಾ ಸೋಮವಾರ ಇಡೀ ದಿನ ನಡೆಸಿದ ಕಸರತ್ತು ಗಮನಸೆಳೆಯಿತು. ಶ್ರಮಿಕ ವರ್ಗದ ಪ್ರಮುಖರೊಂದಿಗೆ ಸತತ ಸಭೆ ನಡೆಸಿರುವ ಜಿ.ಎ.ಬಾವಾ ಅವರು, ಮನೆ ಮನೆ ಪ್ರಚಾರ ಕೈಗೊಂಡು ಕೈ ಸೈನ್ಯಕ್ಜೂ ಚೈತನ್ಯ ತುಂಬಿದರು.
ಈ ನಡುವೆ, ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿಯೂ ಆದ ಜಿ.ಎ.ಬಾವಾ, ಕರಾವಳಿ ಜಿಲ್ಲೆಗಳ ಈ ಬಾರಿ ಜನ ಬದಲಾವಣೆ ಬಯಸಿದ್ದು, ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ಲೇಷಿಸಿದರು.
ಕಾಂಗ್ರೆಸ್‌ನ ‘ಗ್ಯಾರಂಟಿ ಕಾರ್ಡ್’ ಬಗ್ಗೆ ರಾಜ್ಯದ ಜನರಿಗೆ ಕುತೂಹಲ ಮಾತ್ರವಲ್ಲ ವಿಶ್ವಾಸವೂ ಇದೆ ಎಂಬುದು ಗೊತ್ತಾಗುತ್ತಿದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಬಹುತೇಕ ಭರವಸೆಗಳು ಈಡೇರಿದ್ದರಿಂದ ಈ ಬಾರಿಯೂ ಕಾಂಗ್ರೆಸ್ ಗ್ಯಾರೆಂಟಿ ಬಗ್ಗೆ ಜನರು ವಿಶ್ವಾಸ ಹೊಂದಿದ್ದಾರೆ ಎಂದು ಜಿ.ಎ.ಬಾವಾ ತಿಳಿಸಿದರು.
ಬಿಜೆಪಿಯವರು ಓಟು ಕೇಳಿಕೊಂಡು ಮನೆಮನೆ ಭೇಟಿ ಕೈಗೊಂಡಾಗಲೆಲ್ಲಾ ಜನತೆ ಕಾಂಗ್ರೆಸ್‌ನ ಗ್ಯಾರೆಂಟಿ ಕಾರ್ಡ್ ಬಗ್ಗೆ ಕೊಂಡಾಡುತ್ತಿರುವುದು ತಿಳಿಯುತ್ತಿದೆ. ಪ್ರಸಕ್ತ ಗ್ಯಾಸ್ ದರ ಏರಿಕೆ, ವಿದ್ಯುತ್ ದುಬಾರಿ ಬಿಲ್, ಅಗತ್ಯ ವಸ್ತುಗಳ ಬೆಲೆ ಏರಿಕೆಯಂತಹಾ ಪರಿಸ್ಥಿತಿಯಿಂದ ಜನರು ರೋಸಿ ಹೋಗಿದ್ದು, ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನತೆ ಬಹುಮತ ನೀಡಲಿದ್ದಾರೆ ಎಂದು ಜಿ.ಎ.ಬಾವಾ ಹೇಳಿದರು.