ಮಂಗಳೂರು: ಖಾಸಗಿ ಬಸ್ಸುಗಳ ಕಾನೂನು ಬಾಹಿರ ನಡೆಗೆ ಅಂಕುಶ ಹಾಕುವ ಸಂಬಂಧ ದಶಕಗಳ ಹಿಂದೆ ಸರ್ಕಾರ ಕೈಗೊಂಡ ನಿಷ್ಟೂರ ಕ್ರಮದ ಫಲವಾಗಿ ಸರ್ಕಾರದ ಸಾರಿಗೆ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ. ಆದರೆ ಇದೀಗ ಸರ್ಕಾರಿ ಹಿಡಿತದಲ್ಲಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಜನಸಾಮಾನ್ಯರ ಪಾಲಿಗೆ ಸೇವೆ ನೀಡುವ ಬದಲು ಕಂಟಕಪ್ರಾಯ ಎಂಬಂತಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಹಂಚಿಕೊಂಡರೆ ಉಡಾಫೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಧಿಕಾರಿಗಳ ಈ ನಡೆಯಿಂದಾಗಿ ಸಾರ್ವಜನಿಕರೂ ಕೆಎಸ್‌ಆರ್‌ಟಿಸಿ ಬಗ್ಗೆ ಅನುಮಾನ ಪಡುವಂತಾಗಿದೆ.
ಏನಿದು ಅವಾಂತರ?
ಜನರಿಗೆ ಅಗ್ಗ ದರದಲ್ಲಿ ಸಾರಿಗೆ ಸೇವೆ ಮೂಲಕ ಮೂಲ, ಅಗತ್ಯ ಸೌಲಭ್ಯ ಒದಗಿಸುವ ಪರಿಕಲ್ಪನೆಯಲ್ಲಿ ರಾಜ್ಯ ಸರ್ಕಾರ ಸಾರಿಗೆ ನಿಗಮಗಳನ್ನು ಸ್ಥಾಪಿಸಿದೆ. ಆದರೆ ಅಧಿಕಾರಿಗಳ ಅಸಡ್ಡೆ ಹಾಗೂ ಸ್ವಾರ್ಥದ ನಡೆಯಿಂದಾಗಿ ಜನರು ಪಡಬಾರದ ವೇದನೆ ಅನುಭವಿಸುವಂತಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಉದಯ ನ್ಯೂಸ್ ತಂಡ ರಿಯಾಲಿಟಿ ಚೆಕ್‌ಗೆ ಮುಂದಾದ ಸಂದರ್ಭದಲ್ಲಿ ಅಧಿಕಾರಿಗಳ ಒಳ ಮರ್ಮ ಬಟಾಬಯಲಾಗಿದೆ.
ಒಂದು ಊರಿನಿಂದ ಮತ್ತೊಂದು ಊರಿಗೆ ದೂರದ ಪ್ರಯಾಣ ಕೈಗೊಳ್ಳುವ ಪ್ರಯಾಣಿಕರಿಗೆ ಮಾರ್ಗ ಮಧ್ಯೆ ಸಮರ್ಪಕ ಆಹಾರ ವ್ಯವಸ್ಥೆ ಕಲ್ಪಿಸುವುದು ನಿಗಮದ ಜವಾಬ್ಧಾರಿ. ಅದಕ್ಕಾಗಿಯೇ ಕರ್ನಾಟಕದಲ್ಲಿ ಅರ್ಧ ಗಂಟೆ ಪ್ರಯಾಣದ ನಡುವೆ ಸುಸಜ್ಜಿತ ಬಸ್ ನಿಲ್ದಾಣಗಳೂ ಇವೆ. ಆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲೆಂದೇ ಕ್ಯಾಂಟೀನ್ ಹಾಗೂ ಇನ್ನಿತರ ಮಳಿಗೆಗಳನ್ನು ತೆರೆಯಲಾಗಿದೆ. ಆದರೆ ಸಾರಿಗೆ ಬಸ್ಸುಗಳ ಪ್ರಮುಖರ ನಿರ್ದೇಶನವೇ ಬೇರೆ. ದುಡ್ಡು ಕೊಡುವ ಹೊಟೇಲ್‌ಗಳ ಮುಂದೆ ಪ್ರಯಾಣಿಕರನ್ನು ಇಳಿಸುತ್ತಾರೆ. ನಿರ್ವಾಹಕರು ಹಾಗೂ ಚಾಲಕರಿಗೆ ಬಿಟ್ಟಿ ಊಟ ನೀಡುವ ಹೊಟೇಲ್ ಮಾಲೀಕರು ಅದಕ್ಕೆ ಪ್ರತಿಯಾಗಿ ಪ್ರಯಾಣಿಕರಿಂದ ಸುಲಿಗೆ ಮಾಡುತ್ತಾರೆ.
ಇಲ್ಲಿದೆ ನೋಡಿ ಉದಾಹರಣೆ
ಬುಧವಾರ ಬೆಳಿಗ್ಗೆ ಬೆಂಗಳೂರಿನಿಂದ ಕುಂದಾಪುರಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ರಾಜಹಂಸ ಬಸ್ಸು ಸುಮಾರು 1.15ರ ಸುಮಾರಿಗೆ ಸಕಲೇಶಪುರ ತಲುಪಿತ್ತು. ಅಲ್ಲೇ ಸಾರಿಗೆ ನಿಗಮದ ಬಸ್ ನಿಲ್ದಾಣದ ಆವರಣದಲ್ಲೇ ಹೊಟೇಲ್‌ಗಳು ಇದ್ದರೂ ಅಲ್ಲಿ ಮಧ್ಯಾಹ್ನದ ಪ್ರಯಾಣಿಕರ ಊಟಕ್ಕೆಂದು ಬಸ್ಸು ನಿಲ್ಲಿಸಲಿಲ್ಲ. ‘ಡಿಪೋ ಮ್ಯಾನೇಜರ್ ಸೂಚನೆಯಿದೆ. ಅವರ ಸೂಚಿಸಿದ ಹೊಟೇಲ್‌ಗಳಲ್ಲೇ ಊಟಕ್ಕೆ ನಿಲ್ಲಿಸಬೇಕಿದೆ’ ಎಂದು ಹೇಳಿದ್ರು ನಿರ್ವಾಹಕರು.
ಮಟಮಟ ಮದ್ಯಾಹ್ನ 2.05ರ ಸುಮಾರಿಗೆ ಶಿರಾಡಿ ಘಾಟ್‌ನ ಎಂಜಿರಾ ಎಂಬಲ್ಲಿ ‘ಮಲ್ನಾಡ್’ ಎಂಬ ಹೊಟೇಲ್ ಬಳಿ ಊಟಕ್ಕೆಂದು ಬಸ್ ನಿಲ್ಲಿಸಲಾಯಿತು.
ಅಧ್ವಾನದ ಹೊಟೇಲ್..
ಆ ಹೊಟೇಲ್ ಸಿಬ್ಬಂದಿ ಶುಚಿತ್ವ ಕಾಪಾಡಿಲ್ಲ. ಕೋವಿಡ್ ಮಾರ್ಗಸೂಚಿಯನ್ನೂ ಪಾಲಿಸುತ್ತಿರಲಿಲ್ಲ. ಅಷ್ಟೇ ಅಲ್ಲ ಕಳಪೆ ಊಟ ಪೂರೈಸುತ್ತಿದೆ. ಮಹಾನಗರಿ ಬೆಂಗಳೂರಿನಲ್ಲಿ 30ರಿಂದ 40 ರೂಪಾಯಿ ದರದಲ್ಲಿ ಊಟ ಸಿಗುತ್ತಿದ್ದರೆ ಕುಗ್ರಾಮದಲ್ಲಿರುವ ಈ ‘ಮಲ್ನಾಡ್’ ಹೆಸರಿನ ಹೊಟೇಲ್‌ನಲ್ಲಿ ಊಟದ ದರ ಬರೋಬ್ಬರಿ 80 ರೂಪಾಯಿ. ಅದೂ ಕಳಪೆ ಗುಣಮಟ್ಟದ ಊಟ. ಅಲ್ಲಿ ಊಟಕ್ಕೆಂದು ಹೋದ ಪ್ರಯಾಣಿಕರ ಪೈಕಿ ಹತ್ತಾರು ಮಂದಿ ವಯಸ್ಸದವರು, ಇನ್ನೂ ಕೆಲವರು ರೋಗಿಗಳು, ಅವರ ಜೊತೆ ಒಂದಷ್ಟು ಮಕ್ಕಳು.
ಒಂದೆಡೆ ದುಬಾರಿ ಊಟ. ಅಷ್ಟೇ ಅಲ್ಲ, ಅದೂ ಕೂಡಾ ಕಳಪೆ ಆಹಾರ. ಹೀಗಿದ್ದರೂ ಊಟಕ್ಕೆ 80ರೂ ಕೊಡಲೇಬೇಕು. ಇದರಿಂದ ರೋಸಿಹೋದ ಪ್ರಯಾಣಿಕರನೇಕರು ಕೆಸ್ಸಾರ್ಟಿಸಿ ನಿರ್ವಾಹಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ನಿರ್ವಾಹಕರು ಮಾತ್ರ ಬಿಟ್ಟಿ ಊಟ ಮಾಡುತ್ತಾ, ‘ನಾವು ಡಿಪೋ ಮೇನೇಜರ್ ಹೇಳಿದ ಹೊಟೇಲ್ ಮುಂದೆಯೇ ನಿಲ್ಲಿಸಿದ್ದೇವೆ’ ಎಂದು ಸಮಜಾಯಿಷಿ ನೀಡಿ ಜಾರಿಕೊಳ್ಳುತ್ತಿದ್ದರು.
ಆ ತಕ್ಷಣವೇ ಸದರಿ ಬಸ್ ಯಾವ ಡಿಪೋಗೆ ಸೇರಿದ್ದೆಂದು ಪರಿಶೀಲಿಸಿ ಸಂಬಂಧಿತ ಡಿಪೋ ಮೇನೇಜರ್‌ರನ್ನು ಸಂಪರ್ಕಿಸಿದಾಗ ಅವರಿಂದಲೂ ಅಸಮರ್ಪಕ ಉತ್ತರ. ‘ಆ ಹೊಟೇಲ್‌ನವರು ನಮಗೆ ದುಡ್ಡು ಕೊಡುತ್ತಾರೆ. ಹಾಗಾಗಿ ನಿಗಮದ ಬಸ್‌ಗಳನ್ನು ಅಲ್ಲಿ ಬಿಲ್ಲಿಸುತ್ತಿದ್ದೇವೆ’ ಎಂಬ ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲ, ಪ್ರಾದೇಶಿಕ ನಿಯಂತ್ರಣಾಧಿಕಾರಿಗಳೇ ಈ ಬಗ್ಗೆ ನಿರ್ದೇಶನ ಕೊಡುವುದು ಎಂಬ ಸ್ಪಷ್ಟನೆಯೂ ಕುಂದಾಪುರದ ಡಿಪೋ ಮೇನೇಜರ್ ಕಡೆಯಿಂದ ಸಿಕ್ಕಿದೆ. ಎಲ್ಲಾ ಅವಂತರಗಳಿಗೆ ಡಿಸಿಯೇ ಹೊಣೆ ಎಂಬಂತಿತ್ತು ಡಿಪೋ ಮೇನೇಜರ್ ಹೇಳಿಕೆ.
ಪ್ರಯಾಣದ ನಡುವೆ ಅಗತ್ಯ ಸಮಯದಲ್ಲಿ ಸೂಕ್ತ ಊಟ ಕೊಡಿಸುವುದು ನಿಗಮದ ಅಧಿಕಾರಿಗಳ ಜವಾಬ್ಧಾರಿ. ಆದರೆ ಬಿಡಿಕಾಸಿನ ಆಸೆಗಾಗಿ ಎಲ್ಲೆಂದರಲ್ಲಿ, ಯಾವಾಗಲೋ ಊಟಕ್ಕೆ ಅವಕಾಶ ಕಲ್ಲಿಸುವುದು ಎಷ್ಟು ಸರಿ? ಇದು ಕಾನೂನಾತ್ಮಕ ನಡೆಯೇ? ಸಾಂವಿಧಾನಾತ್ಮಕ ಸೇವೆಯೇ ಎಂಬ ಪ್ರಶ್ನೆ ಮೂಡುವಂತಿದೆ. ಇದಕ್ಕೆ ಡಿಸಿ ಹೊಣೆಯೇ ಅಥವಾ ಡಿಪೋ ಮೇನೇಜರ್ ಜವಾಬ್ಧಾರಿಯೇ? ಉತ್ತರಿಸುವವರು ಯಾರು ಎಂಬುದೇ ಕುತೂಹಲ.