ಅಗರ್ತಲಾ: ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದರೆ, ಇನ್ನೊಂದೆಡೆ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಕೂಡಾ ‘ನಾರಿ ನ್ಯಾಯ್ ಪಾದಯಾತ್ರೆ’ ಹಮ್ಮಿಕೊಂಡಿದೆ. ಬಿಜೆಪಿ ರಾಜ್ಯಗಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಖಂಡಿಸಿ ಈ ‘ನಾರಿ ನ್ಯಾಯ್ ಪಾದಯಾತ್ರೆ’ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲ್ಕಾ ಲಂಬಾ, ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಬಿಜೆಪಿ ಆಡಳಿತವಿರುವ ತ್ರಿಪುರಾ ಈಶಾನ್ಯ ಪ್ರದೇಶದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಲವಾರು ರಾಜ್ಯಗಳಲ್ಲಿ ಈ ರೀತಿಯ ದೌರ್ಜನ್ಯ ನಡೆಯುತ್ತಿದ್ದು, ಮಹಿಳೆಯರ ರಕ್ಷಣೆಯನ್ನು ಆಶಿಸಿ ದೇಶಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸುವ ‘ನಾರಿ ನ್ಯಾಯ್ ಪಾದಯಾತ್ರೆ’ಯನ್ನು ಪ್ರಾರಂಭಿಸುವುದಾಗಿ ಘೋಷಿಸಿದರು.
ರಾಜ್ಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಲಂಬಾ, ಬಿಜೆಪಿಯ ‘ಬೇಟಿ ಬಚಾವೋ’ ಅಭಿಯಾನವನ್ನು ಟೀಕಿಸಿದರು. ಬಿಜೆಪಿ ಪಕ್ಷವು ಅತ್ಯಾಚಾರ, ಕಿರುಕುಳ ಮತ್ತು ಹಲ್ಲೆಯಂತಹ ಅಪರಾಧಗಳ ಆರೋಪಿಗಳನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದ ಅವರು ಬಿಜೆಪಿ ನಾಯಕರನೇಕರು ಮಹಿಳೆಯರ ವಿರುದ್ಧದ ಅಪರಾಧಗಳ ಆರೋಪಗಳನ್ನು ಎದುರಿಸುತ್ತಿರುವ ನಿದರ್ಶನಗಳನ್ನು ಉಲ್ಲೇಖಿಸಿದರು.
ಮಹಿಳಾ ಕಾಂಗ್ರೆಸ್, ದೇಶಾದ್ಯಂತ ಮಹಿಳೆಯರನ್ನು ಒಗ್ಗೂಡಿಸಲು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಸಂಘಟನೆಯನ್ನು ಬಲಪಡಿಸುವುದು ಮತ್ತು ಭಾರತದಾದ್ಯಂತ ಪ್ರತಿ ಜಿಲ್ಲೆಯಲ್ಲೂ ‘ನಾರಿ ನ್ಯಾಯ ಪಾದಯಾತ್ರೆ’ ನಡೆಸುವುದು ಪ್ರಾಥಮಿಕ ಉದ್ದೇಶವಾಗಿದೆ ಎಂದವರು ತಿಳಿಸಿದರು.