ಬೆಳಗಾವಿ: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕರಾಳ ದಿನ ಆಚರಿಸಲು ಎಂಇಎಸ್ (MES) ಸಂಘಟನೆ ತಯಾರಿ ನಡೆಸಿರುವಂತೆಯೇ, ಮಹಾರಾಷ್ಟ್ರದಲ್ಲಿ ಕರ್ನಾಟಕ ಸರ್ಕಾರಿ ಬಸ್ಸಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪುಂಡಾಟ ಪ್ರದರ್ಶಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಹೋರಾಟ ನಡೆಯುತ್ತಿದ್ದು, ಉಸ್ಮಾನಾಬಾದ್ ಜಿಲ್ಲೆಯ ಉಮರಗಾ ಸಮೀಪದ ತುರೋರಿ ಗ್ರಾಮದಲ್ಲಿ ಸೋಮವಾರ ಕಿಡಿಗೇಡಿಗಳು KSRTC ಬಸ್‌ಗೆ ಬೆಂಕಿ ಹಚ್ಚಿದ್ದಾರೆ.
ಬೀದರ್ ಜಿಲ್ಲೆ ಭಾಲ್ಕಿಯಿಂದ ಪುಣೆಗೆ ತೆರಳುತ್ತಿದ್ದ ಬಸ್‌ಗೆ ಬೆಂಕಿ ಹಚ್ಚಲಾಗಿದ್ದು ಬಸ್‌ನಲ್ಲಿದ್ದ 48 ಜನರು ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ನಂತರ ಸೋಮವಾರ ರಾತ್ರಿಯಿಂದ ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು KSRTC ಮೂಲಗಳು ತಿಳಿಸಿವೆ.


























































