ಮುಂಬಯಿ: ರಾಷ್ಟ್ರ ಜಾಗರಣ ಕುರಿತಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯ ಮೋಡಿಗೆ ಯುವ ಜನರು ರೊಚ್ಚಿಗೆದ್ದಂತಿದೆ. ಹೋದಲ್ಲೆಲ್ಲಾ ಯುವಜನ ಪಾಳಯದಲ್ಲಿ ಇವರು ಆಕರ್ಷಣೆಯ ಕೇಂದ್ರ ಬಿಂದುವಾಗುತ್ತಿದ್ದು, ಈ ವಿದ್ಯಮಾನ ಬಿಜೆಪಿ ಪರಮೋಚ್ಛ ನಾಯಕರಿಗೂ ಅಚ್ಚರಿ ಉಂಟು ಮಾಡಿದೆ.
ಕಳೆದ ತಿಂಗಳು ರಾಜಸ್ಥಾನ ಪ್ರವಾಸ ಸಂದರ್ಭದಲ್ಲಿ ಬಿಜೆಪಿ ಹುಡುಗರ ನಡುವೆ ಸಂಚಲನ ಸೃಷ್ಟಿಸಿದ ಇವರನ್ನು ‘ಕೇಸರಿ ಸೈನ್ಯದ ಪಾದರಸ’ ಎಂದೇ ಪಕ್ಷದ ಪ್ರಮುಖರು ಬಣ್ಣಿಸಿದ್ದರು. ಇದೀಗ ಅಂಥದ್ದೇ ಮೋಡಿ ಸಿಟಿ ರವಿ ಅವರ ಮಹಾರಾಷ್ಟ್ರ ಪ್ರವಾಸ ಸಂದರ್ಭದಲ್ಲೂ ಪ್ರತಿಬಿಂಭಿಸಿದೆ.
ಹಿರಿಯ ನಾಯಕ ಬಿ.ಎಲ್.ಸಂತೋಷ್ ಅವರ ಸೂತ್ರದಂತೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ತಮ್ಮ ಉಸ್ತುವಾರಿಯ ರಾಜ್ಯಗಳಲ್ಲದೆ, ಇನ್ನೂ ಎರಡು ಹೆಚ್ಚುವರಿ ಪ್ರಾಂತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇದು ಪ್ರಾದೇಶಿಕ ವಿಚಾರಗಳ ಬಗ್ಗೆ ಅರಿವು ಹಾಗೂ ಭಾಷೆಯ ಮೇಲೆ ಹಿಡಿತ ಸಾಧಿಸಲು ಅನುಕೂಲವಾಗುತ್ತದೆ ಎಂಬುದು ಸಂತೋಷ್ ಅವರದ್ದು ಪರಿಕಲ್ಪನೆ. ಈ ಟಾಸ್ಕ್‌ನಲ್ಲಿ ಕರ್ನಾಟಕ ಮೂಲದ ಸಿ.ಟಿ.ರವಿ ವರಿಷ್ಠರಿಂದಲೇ ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಂಡಿದ್ದಾರೆ.
ಆಕರ್ಷಿತರಾಗುತ್ತಿರುವುದು ಯುವಕರೇ..!!
ಸಿ.ಟಿ.ರವಿ ಕಳೆದೆರಡು ತಿಂಗಳಲ್ಲಿ ಮಹಾರಾಷ್ಟ್ರದ ವಿವಿಧೆಡೆ ಆಗಾಗ್ಗೆ ಸವಾರಿ ಕೈಗೊಂಡಿದ್ದಾರೆ. ಭೇಟಿ ನೀಡಿದ ಸಂದರ್ಭಗಳಲ್ಲೆಲ್ಲಾ ಯುವಕರನ್ನು ಕಮಲ ಸೈನ್ಯಕ್ಕೆ ಸೇರಿಸಿಕೊಳ್ಳುತ್ತಾ, ಚತುರತೆಯ ಗೇಮ್ ಮಾಡುತ್ತಿರುವ ರವಿ, ಈ ಬಾರಿ ಮತ್ತಷ್ಟು ಆಕರ್ಷಣೆ ಗಿಟ್ಟಿಸಿಕೊಂಡಿದ್ದಾರೆ. ಮಹಾ ಅಘಾಡಿಯಿಂದ ಆ ರಾಜ್ಯವನ್ನು ಮುಕ್ತಗೊಳಿಸಬೇಕೆಂದು ಟೊಂಕ ಕಟ್ಟಿ ನಿಂತಿರುವ ಅಲ್ಲಿನ ಬಿಜೆಪಿ ನಾಯಕರು ಸಿ.ಟಿ.ರವಿ ಆಗಮನವನ್ನೇ ಎದುರು ನೋಡುತ್ತಿರುವುದು ಮತ್ತೊಂದು ಕುತೂಹಲ.
ಕಳೆದ ಮೂರು ದಿನಗಳಲ್ಲಿ ಅವರು ಭಾಗವಹಿಸಿದ ಕಡೆಗಳಲ್ಲೆಲ್ಲಾ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ತಮ್ಮದೇ ಶೈಲಿಯಲ್ಲಿ ಇವರು ಮಾಡಿದ ಮೋಡಿ ಬಿಜೆಪಿ ರಾಷ್ಟ್ರೀಯ ವರಿಷ್ಠರಲ್ಲೂ ಕುತೂಹಲ ಗರಿಗೆದರುವಂತೆ ಮಾಡಿದೆ.
ಶಿಸ್ತಿನ ಸೇನಾನಿ ಜೊತೆ ಸೆಲ್ಫೀ ಕ್ರೇಜ್..
ಆಗಸ್ಟ್ 6ರಿಂದ ಮುಂಬೈನ, ಉತ್ತಾನ್ ಸಮೀಪ ರಾಂಭಾವ್ ಮ್ಹಾಳಗಿ ಪ್ರಭೋದಿನಿಯಲ್ಲಿ ಬಿಜೆಪಿ ನಡೆದ ಪದಾಧಿಕಾರಿಗಳ ಶಿಬಿರ ವಿಶೇಷ ಕಾರ್ಯಾಗಾರವಾಗಿ ಗಮನಸೆಳೆದರೆ, ಬಿಜೆಪಿ ಮಾಧ್ಯಮ ವಿಭಾಗದ ಮೂಲಕ ನಡೆದ ಅಭ್ಯಾಸ ವರ್ಗದಲ್ಲಂತೂ ಸಿ.ಟಿ.ರವಿ ಅವರು ಪತ್ರಕರ್ತರ ನಡುವೆಯೂ ಕುತೂಹಲದ ಕೇಂದ್ರಬಿಂದುವಾದರು.
ಆರೆಸ್ಸೆಸ್‌ನ ಸಿದ್ದಾಂತ ಹಾಗೂ ಬಿಜೆಪಿಯ ಶಿಸ್ತಿನಂತೆ ರಾಷ್ಟ್ರೀಯತೆ ವಿಚಾರಧಾರೆಗಳನ್ನೇ ತಮ್ಮ ಮಾತಿನುದ್ದಕ್ಕೂ ಹರಿಯಬಿಟ್ಟ ಸಿ.ಟಿ.ರವಿ, ದಕ್ಷಿಣ ಭಾರತದಲ್ಲಿನ ರಾಜಕೀಯ ಸ್ಥಿತಿಗತಿ, ಮುಂದೆ ಎದುರಾಗಬಹುದಾದ ಸವಾಲುಗಳು, ಮುಂದಿನ ರಾಜಕೀಯ ದ್ರುವೀಕರಣಗಳ ಬಗ್ಗೆ ತಮ್ಮದೇ ಧಾಟಿಯಲ್ಲಿ ವಿಶ್ಲೇಷಣೆ ಮಾಡಿದರು. ಪ್ರಾಂತ ಮಟ್ಟದಲ್ಲೂ ಬಿಜೆಪಿಯ ಅಗತ್ಯ ಏನು ಎಂಬುದನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದರು.
ಈ ಕಾರ್ಯಾಗಾರ ಸಂದರ್ಭದಲ್ಲಿ ಯುವಜನ ಸಮೂಹ ಸಿ.ಟಿ.ರವಿ ಜೊತೆಗೆ ಸೆಲ್ಫೀಗಾಗಿ ಮುಗಿಬಿದ್ದ ಪ್ರಸಂಗವೂ ಗಮನಸೆಳೆಯಿತು.
ನಡ್ಡಾ ಅಡ್ಡೆಯಲ್ಲೂ ಶಹಬ್ಬಾಸ್‌ಗಿರಿ..
ಮಹಾರಾಷ್ಟ್ರದ ಈ ಬೆಳವಣಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ.ನಡ್ಡಾ ಅವರನ್ನೂ ಆಶ್ಚರ್ಯಚಕಿತರನ್ನಾಗಿಸಿದೆ. ಪಕ್ಷ ಸಂಘಟನೆಯಲ್ಲಿ ತೊಡಗಿದ ಆರಂಭದಲ್ಲಿ ಹಿಂದಿಯಲ್ಲಿ ಮಾತನಾಡಲು ಚಡಪಡಿಸುತ್ತಿದ್ದ ಸಿ.ಟಿ.ರವಿ ಇದೀಗ ಭಾಷೆಯ ಮೇಲೆ ಹಿಡಿತ ಸಾಧಿಸಿದ್ದಾರೆ. ವಿಶಿಷ್ಟ ಸಂಘಟನಾ ಚತುರ ‘ಬಿಜೆಪಿಯನ್ನು ಬೆಳೆಸುವ ಸಿರಿ’ ಎಂದು ಬಣ್ಣಿಸಿದ್ದಾರೆ.
ದಕ್ಷಿಣ ಭಾರತದ ರಾಜ್ಯಗಳತ್ತ ಗಮನಹರಿಸಿರುವ ಅವರು ಇದೀಗ ಆಂದ್ರಪ್ರದೇಶ, ತೆಲಂಗಾಣದ ಪ್ರವಾಸದಲ್ಲಿದ್ದಾರೆ.