ಬಳ್ಳಾರಿ: ರಾಜ್ಯದಲ್ಲೂ ಶೀಘ್ರವೇ ಲವ್ ಜಿಹಾದ್ ವಿರುದ್ಧ ಕಾಯ್ದೆ ಅನುಷ್ಠಾನಕ್ಕೆ ತರುವ ಮೂಲಕ ಬಿಎಸ್ವೈ ಸರ್ಕಾರವು ರಾಜ್ಯದ ಮಹಿಳೆಯರಿಗೆ ರಕ್ಷಣೆ ಒದಗಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಲೆ ಹೊಸಪೇಟೆಯಲ್ಲಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಪ್ರಿಯ, ರೈತಪರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರವು ನುಡಿದಂತೆ ನಡೆಯುತ್ತಿದೆ. ಈಗಾಗಲೇ ಗೋಹತ್ಯಾ ನಿಷೇಧ ಕಾನೂನನ್ನು ಜಾರಿಗೊಳಿಸಿದೆ ಎಂದು ಮೆಚ್ಚುಗೆ ಸೂಚಿಸಿದರು.
ಮಹಿಳೆಯರಿಗೆ ಅನ್ಯಾಯ ಆಗುವುದನ್ನು ತಡೆಯುವಂತೆ ಕೋರ್ಟ್ ನೀಡಿದ್ದ ತೀರ್ಪನ್ನೇ ಹಿಂದಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಅನುಷ್ಠಾನಗೊಳಿರಲಿಲ್ಲ. ಮಹಿಳೆಗೆ ಎಲ್ಲೇ ಅನ್ಯಾಯವಾದರೂ ಅದನ್ನು ತಡೆಯಬೇಕು ಎಂಬ ನೀತಿಯನ್ನು ಅನುಸರಿಸುವ ಉದ್ದೇಶದಿಂದ ಮೋದಿ ಸರಕಾರವು ತ್ರಿವಳಿ ತಲಾಖ್ ರದ್ದು ಮಾಡುವ ಮಹತ್ವದ ನಿರ್ಧಾರ ಮಾಡಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತು ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಮರ್ಥ ನಾಯಕತ್ವದಲ್ಲಿ ಸರಕಾರಗಳು ಅಭಿವೃದ್ಧಿ ಪರವಾಗಿ ಮತ್ತು ಮಹಿಳೆಯರ ರಕ್ಷಣೆಗೆ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರು.
ನೀರು, ಭೂಮಿ, ಆಕಾಶ ಸೇರಿದಂತೆ ಎಲ್ಲಡೆ ಹಗರಣಗಳಿದ್ದ ಕಾಂಗ್ರೆಸ್- ಯುಪಿಎ 10 ವರ್ಷಗಳ ಆಡಳಿತದಲ್ಲಿ ಎಲ್ಲೆಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಿತ್ತು. ಹಗರಣಗಳದ್ದು ನಿರಂತರ ಸುದ್ದಿಯಾಗುತ್ತಿತ್ತು. ವಂಶಾಡಳಿತ, ಜಾತಿ, ಮತದ ಆಧಾರದ ರಾಜಕಾರಣಕ್ಕೆ ಜನರು ಮುಕ್ತಿ ಬಯಸಿ ಹಗರಣಮುಕ್ತ ಮತ್ತು ಅಭಿವೃದ್ಧಿ ಪರ ಸರಕಾರಕ್ಕಾಗಿ ನರೇಂದ್ರ ಮೋದಿ ಅವರ ನೇತೃತ್ವವನ್ನು ಬೆಂಬಲಿಸಿ ಅಧಿಕಾರಕ್ಕೆ ತಂದಿದ್ದಾರೆ ಎಂದು ಅವರು ವಿಶ್ಲೇಷಣೆ ಮಾಡಿದರು.
ಭಾರತ ಮತ್ತು ಪಾಕಿಸ್ತಾನವನ್ನು ವಿಭಜಿಸಿದ ಕಾಂಗ್ರೆಸ್ ಪಕ್ಷವು ತುಷ್ಟೀಕರಣದ ನೀತಿ ತನ್ನದಾಗಿಸಿಕೊಂಡಿತ್ತು. ಅಲ್ಪಸಂಖ್ಯಾತ- ಬಹುಸಂಖ್ಯಾತರ ವಿಭಜನೆ, ಗೋಹತ್ಯಾ ನಿಷೇಧದ ವಿರೋಧ, ರಾಮಮಂದಿರ ನಿರ್ಮಾಣಕ್ಕೆ ವಿರೋಧ ಮಾಡಿತು. 370ನೇ ವಿಧಿ ರದ್ದತಿಯನ್ನೂ ವಿರೋಧಿಸಿತು. ಇದೆಲ್ಲಾ ಕಾರಣಕ್ಕಾಗಿ ಜನರು ಕಾಂಗ್ರೆಸ್ಸನ್ನು ತಿರಸ್ಕರಿಸಿ, ಜನಪರ- ರಾಷ್ಟ್ರವಾದದ ಪಕ್ಷವಾದ ಬಿಜೆಪಿಯನ್ನು ಗೆಲ್ಲಿಸಿದ್ದಾರೆ ಎಂದು ನಳಿನ್ ಕುಮಾಾರ್ ಹೇಳಿದರು.