ಬೆಂಗಳೂರು: ಉಡುಪಿ ಜಿಲ್ಲೆಯಲ್ಲಿನ ಅತ್ಯಾಚಾರ ಕೃತ್ಯವನ್ನು ಖಂಡಿಸಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್, ಲವ್ ಜಿಹಾದ್ ಲಿಂಕ್ ಇರುವ ಅತ್ಯಾಚಾರ ಪ್ರಕರಣಗಳು ಹೆಚ್ಚಳವಾಗಿದ್ದು ಸರ್ಕಾರದ ಕುಮ್ಮಕ್ಕಿನಿಂದಲೇ ಕೃತ್ಯಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ತಮ್ಮನ್ನು ಏನೂ ಮಾಡುವುದಿಲ್ಲ ಎಂಬ ನಂಬಿಕೆ ಇಂತಹವರಿಗೆ ಬಂದಿದೆ. ಕೇರಳದಲ್ಲಿ ಲವ್ ಜಿಹಾದ್ ಕೇಂದ್ರವೂ ಇದ್ದು, ಅಲ್ಲಿ ಯುವಕರಿಗೆ ತರಬೇತಿ ನೀಡಲಾಗುತ್ತಿದೆ. 2047 ರೊಳಗೆ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುತ್ತೇವೆ ಎಂಬ ಕರಪತ್ರಗಳು ಕೂಡ ಹರಿದಾಡಿವೆ ಎಂದು ಅಶೋಕ್ ಆರೋಪಿಸಿದರು.
ಕೊಲೆ ಆರೋಪಿ ನಟ ದರ್ಶನ್ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಫೋಟೋ ತೆಗೆಯಲು ಮೊಬೈಲ್ ಎಲ್ಲಿಂದ ಬಂತು? ಜೈಲಿನಲ್ಲಿ ರಾಜಾರೋಷವಾಗಿ ಸಿಗರೇಟು, ಕಾಫಿ, ಮಾದಕ ವಸ್ತು ನೀಡಲಾಗುತ್ತಿದೆ. ಈಗಾಗಲೇ ಕಾನೂನು ಸುವ್ಯವಸ್ಥೆ ಕುಸಿದುಹೋಗಿದೆ. ಅತ್ಯಾಚಾರ, ಕೊಲೆ ಹೆಚ್ಚಿದೆ. ಸರ್ಕಾರ ಉಳಿಯುತ್ತೋ, ಇರುತ್ತೋ ಎಂದೇ ಶಾಸಕರು, ಸಚಿವರು ಚಿಂತೆ ಮಾಡುತ್ತಿದ್ದಾರೆ. ಜೈಲಿನಲ್ಲಾದ ಈ ಘಟನೆಗೆ ಸರ್ಕಾರ ಸರಿಯಾದ ಉತ್ತರ ನೀಡಬೇಕು. ತನಿಖೆ ಮಾಡುತ್ತೇವೆ ಎಂದರೆ ಏನೂ ಉಪಯೋಗವಿಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ತನಿಖೆ ಸಂಬಂಧ ಬಿಜೆಪಿ-ಜೆಡಿಎಸ್‌ನಿಂದ ಕಾನೂನು ಹೋರಾಟ ಮಾಡಲು ಚರ್ಚೆ ನಡೆಯುತ್ತಿದೆ. ಇದರ ಜೊತೆಗೆ ಭ್ರಷ್ಟಾಚಾರದ ವಿರುದ್ಧದ ಹೋರಾಟವೂ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.