ಬೆಂಗಳೂರು: ಬುಧವಾರ ಜಾರಿ ನಿರ್ದೇಶನಾಲಯದ ಕಾರ್ಯಾಚರಣೆಯಿಂದ ಗಮನಸೆಳೆದಿದ್ದ ಕರ್ನಾಟಕದಲ್ಲಿ ಇಂದು ಲೋಕಾರ್ಯಕ್ತ ದಾಳಿ ಸಂಚಲನ ಸೃಷ್ಟಿಸಿದೆ. ಗುರುವಾರ ಬೆಳ್ಳಂಬೆಳಗ್ಗೆಯೇ ಕಾರ್ಯಾಚರಣೆಯ ಅಖಾಡಕ್ಕೆ ಧುಮುಕಿರುವ ಲೋಕಾಯುಕ್ತ ತಂಡ 56 ಕಡೆ ವಿವಿಧ ಇಲಾಖೆಗಳ ಅಧಿಕಾರಿಗಳ ಹಾಗೂ ಆಪ್ತರ ನಿವಾಸಗಳ, ಕಚೇರಿಗಳ ದಾಳಿ ನಡೆಸಿದೆ.
ಬೆಂಗಳೂರು, ಮೈಸೂರು, ಬೆಳಗಾವಿ, ಹಾಸನ, ಚಿತ್ರದುರ್ಗ, ರಾಮನಗರ, ಮಂಡ್ಯ ಸಹಿತ ವಿವಿಧ ಜಿಲ್ಲೆಗಳಲ್ಲಿ ಈ ಕಾರ್ಯಾಚರಣೆ ನಡೆದಿದೆ. 11 ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಲಗ್ಗೆ ಹಾಕಿರುವ ಲೋಕಾಯುಕ್ತ ಪೊಲೀಸರು ಆಸ್ತಿಪಾಸ್ತಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಹಾಸನದಲ್ಲಿ ಗ್ರೇಡ್-1 ಕಾರ್ಯದರ್ಶಿ ಜಗದೀಶ್ ಎಂಬವರ ಮನೆ ಮೇಲೆ ದಾಳಿ ನಡೆದಿದೆ.
ಚಿತ್ರದುರ್ಗದಲ್ಲಿ ನಿವೃತ್ತ ಇಂಜಿನಿಯರ್ ಎಂ ರವೀಂದ್ರಗೆ ಸೇರಿದ ಮನೆ, ಫಾರ್ಮ್ಹೌಸ್ ಮೇಲೆ ದಾಳಿ ನಡೆದಿದೆ.
ಕೋಲಾರದ ತಹಶೀಲ್ದಾರ್ ವಿಜಿಣ್ಣ ಮನೆ ಮೇಲೆ ದಾಳಿ ನಡೆದಿದೆ,
ಮೈಸೂರಿನಲ್ಲಿ ನೀರಾವರಿ ಇಲಾಖೆಯ ಸೂಪರಿಡೆಂಟ್ ಇಂಜಿನಿಯರ್ ಕೆ. ಮಹೇಶ್ ಎಂಬವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಂಡ್ಯದ ನಿವೃತ್ತ ಇಇ ಶಿವರಾಜ್ ಮತ್ತು ಸಂಬಂಧಿಕರ ಮಂಡ್ಯ, ಮೈಸೂರು, ಬೆಂಗಳೂರಿನ ವಿವಿಧೆಡೆ ಮನೆಗಳ ಮೇಲೆ ದಾಳಿ ನಡೆದಿದೆ.
ರಾಮನಗರದಲ್ಲಿ ಹಾರೋಹಳ್ಳಿ ವಿಜಯಣ್ಣ ಎಂಬವರ ಮನೆ ಮೇಲೂ ದಾಳಿ ನಡೆದಿದೆ.
ಬೆಳಗಾವಿಯಲ್ಲಿ ಪಂಚಾಯತ್ರಾಜ್ ಇಲಾಖೆಯ ಮಹಾದೇವ ಬನ್ನೂರ ಎಂಬವರ ಹಾಗೂ ಸಂಬಂಧಿಕರ ಮನೆ ಮೇಲೂ ಲೋಕಾಯುಕ್ತ ತಂಡ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದೆ.
ಬೆಳಗಾವಿ ನಿರ್ಮಿತಿ ಕೇಂದ್ರದ ಶೇಖರಗೌಡ ಎಂಬವರ ಮನೆ ಮೇಲೂ ಅಧಿಕಾರಿಗಳು ದಾಳಿ ಕೈಗೊಂಡಿದ್ದರೆ.
ಬಿಬಿಎಂಪಿಯ ಕೆಂಗೇರಿಯಲ್ಲಿನ ಅಧಿಕಾರಿ ಬಸವರಾಜ್ ಎಂಬವರ ಕಲಬುರಗಿಯಲ್ಲಿರುವ ಮನೆ ಮೇಲೂ ದಾಳಿ ನಡೆದಿದೆ ಎನ್ನಲಾಗಿದೆ.
ದಾವಣಗೆರೆಯ 5 ಕಡೆ ಲೋಕಾಯುಕ್ತ ಕಾರ್ಯಾಚರಣೆ ನಡೆದಿದ್ದು, ಬೆಸ್ಕಾಂ ಇಂಜಿನಿಯರ್ ಉಮೇಶ್ ಮನೆ ಮೇಲೂ ದಾಳಿ ನಡೆದಿದೆ.