ಬೆಂಗಳೂರು: ಲೋಕಸಭಾ ಚುನಾವಣಾ ಅಖಾಡದಲ್ಲಿ ಅಕ್ರಮಗಳ ಬಗ್ಗೆ ಹದ್ದಿನ ಕಣ್ಣಿಟ್ಟಿರುವ ಚುನಾವಣಾ ಆಯೋಗ ಈ ವಾರಾಂತ್ಯದಲ್ಲಿ ಬರೋಬ್ಬರಿ 87.78 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ.
ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಕಾರ್ಯಾಚರಣೆಗಿಳಿದಿರುವ ಚುನಾವಣಾ ಅಧಿಕಾರಿಗಳು ಏಪ್ರಿಲ್ 12 ರ ಬೆಳಿಗ್ಗೆ 9 ರಿಂದ ಏಪ್ರಿಲ್ 13 ರ ಬೆಳಿಗ್ಗೆ 9 ಗಂಟೆಯವರೆಗೆ ಅಂದಾಜು 32,58,68,623 ರೂಪಾಯಿ ಮೌಲ್ಯದ 87 ಕೆಜಿ ಚಿನ್ನ ವಶಪಡಿಸಿಕೊಂಡಿದ್ದಾರೆ. ಜೊತೆಗೆ ಸುಮಾರು 27,82,000 ಮೌಲ್ಯದ 35.59 ಕಿಲೋ ತೂಕದ ಬೆಳ್ಳಿಯ ವಸ್ತುಗಳನ್ನೂ ವಶಪಡಿಸಿಕೊಂಡಿದೆ. ಈ ಚಿನ್ನ ಮತ್ತು ಬೆಳ್ಳಿಯ ಮೌಲ್ಯ ಸುಮಾರು 101.65 ಕೋಟಿ ರೂಪಾಯಿ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ರಾಮನಗರದಲ್ಲಿ 19,02,61,638 ಮೌಲ್ಯದ 28.5 ಕೆಜಿ ಚಿನ್ನ ಮತ್ತು 28 ಕೆಜಿ ಬೆಳ್ಳಿ, ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ 10,06,985 ಮೌಲ್ಯದ 22.96 ಕೆಜಿ ಬೆಳ್ಳಿ, ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದಲ್ಲಿ 9.35 ಕೋಟಿ ರೂಪಾಯಿ ಮೌಲ್ಯದ 30 ಕೆಜಿ ಚಿನ್ನ ಮತ್ತು 5.98 ಲಕ್ಷ ರೂಪಾಯಿ ಮೌಲ್ಯದ 7.59 ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.