ವರದಿ: ಹೆಚ್.ಎಂ.ಪಿ. ಕುಮಾರ್
ರೈತರ ಪರ ಬ್ಯಾಟಿಂಗ್ ಮಾಡಿದ ರೇಣುಕಾಚಾರ್ಯ, ಲಾಕ್ ಡೌನ್ ನಿಯಮದ ಸಮಯ ಬದಲಾವಣೆಗೆ ಸಿಎಂ ಬಳಿ ಮನವಿ, ಯಾವ ಕಾರಣಕ್ಕೆ ಸಮಯ ಬದಲಾವಣೆ ಮಾಡಬೇಕು ಗೊತ್ತಾ…?
ದಾವಣಗೆರೆ: ಸರ್ಕಾರವು ಈಗಾಗಲೇ ಹೊರಡಿಸಿರುವ ಲಾಕ್‌ಡೌನ್ ನಿಯಮವನ್ನು ಜನಪರ ಸರ್ಕಾರದ ಭಾಗವಾಗಿ ಸ್ವಾಗತಿಸುತ್ತೇನೆ. ಆದರೆ ದಾವಣಗೆರೆ ಜಿಲ್ಲೆ ಹೊನ್ನಾಳಿ ಮತಕ್ಷೇತ್ರದ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕಿನಲ್ಲಿ ರೈತಾಪಿ ವರ್ಗ ಅತಿ ಹೆಚ್ಚಾಗಿರುತ್ತದೆ. ನನ್ನ ಮತ ಕ್ಷೇತ್ರದ ಹಾಗೂ ರಾಜ್ಯದ ಇನ್ನಿತರೆ ತರಕಾರಿ ಬೆಳೆ ಅವಲಂಬಿತರಾಗಿರುವ ರೈತರಿಗೆ ಲಾಕ್ ಡೌನ್ ನಿಯಮದ ಪ್ರಕಾರ ರೈತರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ, ತರಕಾರಿ ಮಾರಾಟ ಮಾಡಲು ಹಾಗೂ ಖರೀದಿಸಲು ಬೆಳಗ್ಗೆ 6:00 ರಿಂದ 10:00 ಗಂಟೆಯವರೆಗೆ ಸಮಯ ನಿಗದಿ ಮಾಡಿರುವುದು ಸ್ವಲ್ಪ ಮಟ್ಟಿಗೆ ಅನಾನುಕೂಲ ವಾಗಿರುತ್ತದೆ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯೂ ಆದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸಿಎಂ ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿದ್ದಾರೆ.
ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಅವಳಿ ತಾಲ್ಲೂಕುಗಳಾದ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ರೈತರು ಅತಿ ಹೆಚ್ಚು ತರಕಾರಿ ಬೆಳೆಯುತ್ತಾರೆ. ಬೆಳೆದ ತರಕಾರಿಯನ್ನು ಮಂಗಳೂರು, ಉಡುಪಿ ಇನ್ನಿತರೇ ಜಿಲ್ಲೆಗಳಿಗೆ ಸರಬರಾಜು ಮಾಡಲಾಗುತ್ತದೆ. ಹಾಗೂ ತರಕಾರಿ ಶೇಂಗಾ ಮೆಕ್ಕೆಜೋಳ ಬೆಳೆದು ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಾಗಣೆ ಮಾಡಬೇಕಾಗುತ್ತದೆ. ತರಕಾರಿ ಕಟಾವು ಮಾಡಲು ಹಾಗೂ ಕಟಾವು ಮಾಡಿದ ತರಕಾರಿಯನ್ನು ಲಾರಿಗೆ ತುಂಬಿ ಕಳುಹಿಸಲು ಕೂಲಿ ಕಾರ್ಮಿಕರು ಬೆಳಗ್ಗೆ 8:00 ರಿಂದ 9:00 ಗಂಟೆಗೆ ಆಗಮಿಸುತ್ತಾರೆ ಹಾಗೂ ಮಾರುಕಟ್ಟೆಗೆ ಖರೀದಿದಾರರು ತಡವಾಗಿ ಆಗಮಿಸಿ ಸಮಯದ ಕೊರತೆಯಿಂದ ಕಡಿಮೆ ಬೆಲೆಗೆ ಖರೀದಿಸಲು ಒಪ್ಪಿಸುತ್ತಾರೆ ಎಂದವರು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.
ಪ್ರಸ್ತುತ ಲಾಕ್‌ಡೌನ್ ಸಮಯದಿಂದಾಗಿ ರೈತರಿಗೆ ಅನಾನುಕೂಲ ಉಂಟಾಗಿದ್ದು ಸಮಯದ ಅಭಾವದಿಂದ ಸರಿಯಾದ ಸಮಯಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹಾಗೂ ಇತರೆ ಜಿಲ್ಲೆಗಳಿಗೆ ತರಕಾರಿಯನ್ನು ಸಾಗಿಸಲು ಸಮಯದ ಅಭಾವ ಉಂಟಾಗಿ ಬೆಳೆದ ತರಕಾರಿಗಳು ಸರಿಯಾದ ರೀತಿಯಲ್ಲಿ ಉಪಯೋಗಕ್ಕೆ ಬಾರದೆ ಹಾಗೂ ಸೂಕ್ತ ಬೆಲೆ ದೊರಕದೆ ರೈತರು ಸಂಕಷ್ಟಕ್ಕೆ ಒಳಗಾಗಿರುತ್ತಾರೆ. ಹಾಗಾಗಿ ಸದರಿ ಲಾಕ್ ಡೌನ್ ನಿಯಮವನ್ನು ಸ್ವಲ್ಪ ಮಟ್ಟಿಗೆ ಸಡಿಲಿಸಿ ರೈತರ ಹಿತದೃಷ್ಟಿಯಿಂದ ಬೆಳಗ್ಗೆ 6:00 ಗಂಟೆಯಿಂದ ಮಧ್ಯಾಹ್ನ 3:00 ಗಂಟೆಯವರೆಗೆ ಸಮಯವನ್ನು ವಿಸ್ತರಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ ಮತ್ತು ವಿಶ್ವನಾಥ್ ಉಪಸ್ಥಿತರಿದ್ದರು.