ಬೆಂಗಳೂರು-ಸಮಸ್ತ ವೀರಶೈವ -ಲಿಂಗಾಯಿತ ಸಮುದಾಯದಲ್ಲಿರುವ ಸಣ್ಣ ಸಣ್ಣ ಉಪಪಂಗಡಗಳನ್ನು ಗುರುತಿಸಿ 2ಎಗೆ ಸೇರ್ಪಡೆ ಮಾಡಿ ಸಾಮಾಜಿಕ ನ್ಯಾಯ ಒದಗಿಸಲು ಹಿಂದುಳಿದ ವಗ೯ಗಳ ಆಯೋಗ
ಮುಂದಾಗಬೇಕೆಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಮನವಿ ಮಾಡಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಬಹಿರಂಗ ವಿಚಾರಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ – ಲಿಂಗಾಯಿತ ಸಮುದಾಯದಲ್ಲಿ ಅನೇಕ ಉಪಪಂಗಡಗಳಿದ್ದು, ಇವುಗಳನ್ನು ಆಯೋಗ ಗುರುತಿಸಿ ಮೀಸಲಾತಿ ಸೌಲಭ್ಯ ಒದಗಿಸುವ ಮೂಲಕ ಸಾಮಾಜಿಕ ನ್ಯಾಯ ಕೊಡಬೇಕೆಂದು ಅವರು ಸಲಹೆ ಮಾಡಿದರು.
ಪಂಚಮಸಾಲಿ ಸಮುದಾಯವು ಮೂಲತಃ ಕೃಷಿ ಅವಲಂಬಿತವಾಗಿದೆ. ಈಗಲೂ ನಮ್ಮಲ್ಲಿ ಐಎಎಸ್ಐಪಿಎಸ್ ,ಕೆಎಎಸ್ ಸೇರಿದಂತೆ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದವರ ಸಂಖ್ಯೆ ಸೀಮಿತವಾಗಿದೆ. ಹೀಗಾಗಿ ನಮ್ಮ ಸಮುದಾಯದವನ್ನು 2 ಗೆ ಸೇಪ೯ಡೆ ಮಾಡಬೇಕು ಎಂದು ಹೇಳಿದರು.
ಹಿಂದುಳಿದ ವರ್ಗಗಳ ಆಯೋಗ ಈಗಾಗಲೇ ಕುಲಶಾಸ್ತ್ರ ಅಧ್ಯಯನ ನಡೆಸುತ್ತಿದೆ. ಸಮುದಾಯಕ್ಕೆ ಸೇರಿದ ಮಠಾಧೀಶರು ಹಾಗೂ ಮುಖಂಡರಿಂದಲೂ ಅಭಿಪ್ರಾಯವನ್ನು ಪಡೆಯುತ್ತಿದ್ದಾರೆ. ಆಯೋಗದಿಂದ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.
ಆಯೋಗವು ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಎಲ್ಲವನ್ನೂ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಲಿದೆ. ನಂತರ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರು ಸಂಪುಟದಲ್ಲಿ ಚರ್ಚಿಸಿ ಸೂಕ್ತವಾದ ತೀರ್ಮಾವನ್ನು ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಬೇಕೆಂಬುದು ದಶಕಗಳ ಬೇಡಿಕೆಯಾಗಿದೆ. ಇದಕ್ಕಾಗಿ ಅನೇಕರು ಹೋರಾಟ ನಡೆಸಿದ್ದಾರೆ. ಸರ್ಕಾರ ಸೂಕ್ತವಾದ ನ್ಯಾಯ ಸಿಗಲಿದೆ ಎಂದು ತಿಳಿಸಿದರು.
ಈ ಹಿಂದೆ 1871ರಲ್ಲಿ ಮಿಲ್ಲರ್ ಸಮಿತಿಯು ಹಿಂದುಳಿದ ವರ್ಗಗಳ ಸಮಿತಿ ಮತ್ತು ಮುಂದುವರೆದ ಜಾತಿ ಎಂಬ ವರದಿಯನ್ನು ನೀಡಿತ್ತು. ಇಲ್ಲಿಯೂ ಕೂಡ ಪಂಚಮಸಾಲಿ ಸಮುದಾಯ ಹಿಂದುಳಿದಿದೆ ಎಂದು ಉಲ್ಲೇಖಿಸಿದೆ ಎಂದರು.
ಸಮುದಾಯಕ್ಕೆ ಮೀಸಲಾತಿ ಸಿಗಬೇಕೆಂದು ಕೂಡಸಂಗಮ ಮಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರದ ಮಠದ ಶ್ರೀ ವಚನಾಂದ ಸ್ವಾಮೀಜಿಗಳು, ಮುಖಂಡರು, ಜನಪ್ರತಿನಿಧಿಗಳು ಸೇರಿದಂತೆ ಅನೇಕರು ಹೋರಾಟ ನಡೆಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಸುಮಾರು 10 ಲಕ್ಷ ಜನ ಸೇರಿದ್ದರ ಹಿಂದೆ ಎಲ್ಲರ ಪರಿಶ್ರಮವಿದೆ. ಇದರಲ್ಲಿ ಯಾರೊ ಒಂದಿಬ್ಬರ ಪ್ರಯತ್ನ ಇಲ್ಲ ಎಂದು ಪರೋಕ್ಷವಾಗಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ವಿಜಯಾನಂದ ಕಾಶಂಪರ್ ಅವರ ಹೆಸರು ಹೇಳದೆ ತಿರುಗೇಟು ನೀಡಿದರು.
ನಾನು ಎಲ್ಲಿಗೆ ಬರಬೇಕು?, ಎಲ್ಲಿಗೆ ಹೋಗಬಾರದು ಎಂಬ ಸಾಮಾನ್ಯ ಜ್ಞಾನವಿದೆ. ನಾನು ಬೇರೆಯವರಿಂದ ಕಲಿಯಬೇಕಾದ ಅಗತ್ಯವಿಲ್ಲ ಎಂದು ತಿರುಗೇಟು ಕೊಟ್ಟರು.
ಈ ಹಿಂದೆ 2010ರಲ್ಲೇ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಲಿಂಗಾಯಿತ ಪಂಚಮಸಾಲಿ ಸಮುದಾಯವನ್ನು 2ಎ ಸೇರ್ಪಡೆಯಾಗುವ ಕುರಿತು ಸಮಿತಿ ರಚಿಸಲಾಗಿತ್ತು. ನಾನು ಆ ಸಮಿತಿಯ ಸದಸ್ಯನಾಗಿದ್ದೆ ಕಾರಣಾಂತರಗಳಿಂದ ಸಾಧ್ಯವಾಗಿಲ್ಲ ಎಂದರು.
ನಮ್ಮ ಸಮುದಾಯದ ಬಗ್ಗೆ ಸಿಎಂ ಅವರು ಅಪಾರವಾದ ಕಾಳಜಿ ಇಟ್ಟುಕೊಂಡಿದ್ದಾರೆ. ಸಮುದಾಯಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ. ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಏಕೈಕ ನಾಯಕ. ಅವರ ನಾಯಕತ್ವದಲ್ಲೇ 2ಎ ಸೇರ್ಪಡೆ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.