ಸಕಲೇಶಪುರ: ಮಲೆನಾಡಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ಭೂಕುಸಿತ ಉಂಟಾಗಿ, ಬೆಂಗಳೂರು–ಮಂಗಳೂರು ರೈಲ್ವೆ ಮಾರ್ಗದಲ್ಲಿ ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಸಕಲೇಶಪುರದ ಮಾರನಹಳ್ಳಿ–ಎಡಕುಮಾರಿ ಪ್ರದೇಶದ ಸತತ 7 ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಟ್ಟು 15 ಕಡೆಗಳಲ್ಲಿ ಭೂಕುಸಿತ ಸಂಭವಿಸಿದ್ದು, ಹಳಿ ಮೇಲೆ ಮಣ್ಣು, ಕಲ್ಲುಗಳು ಹಾಗೂ ಮರಗಳು ಕುಸಿದು ಬಿದ್ದಿವೆ. ಪರಿಣಾಮವಾಗಿ, ಪ್ರಯಾಣಿಕರ ಹಾಗೂ ಸರಕು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ರೈಲ್ವೆ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಆದರೆ, ನಿರಂತರ ಮಳೆಯಿಂದಾಗಿ ಕಾರ್ಯದಲ್ಲಿ ವಿಳಂಬವಾಗುವ ಸಾಧ್ಯತೆಯಿದೆ.
ಮಳೆಯಿಂದಾಗಿ ಎನ್‌ಎಚ್-75 ಶಿರಾಡಿಘಾಟ್ ರಸ್ತೆಯಲ್ಲಿಯೂ ಭೂಕುಸಿತ ಉಂಟಾಗಿ, ಮರಗಳು ಹಾಗೂ ಮಣ್ಣು ರಸ್ತೆ ಮೇಲೆ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.