ಬೆಂಗಳೂರು: ರಾಜಧಾನಿ ಹೊರವಲಯದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕುಟುಂಬ ಒತ್ತುವರಿ ಮಾಡಿದೆ ಎನ್ನಲಾದ ಜಮೀನು ವಿಚಾರದಲ್ಲಿ ಕಾನೂನು ಕ್ರಮಕ್ಕೆ ಹೈಕೋರ್ಟ್ ತಡೆ ನೀಡಿದೆ.
ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿ ಸರ್ಕಾರಿ ಜಮೀನು ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ರಾಮನಗರ ತಹಶೀಲ್ದಾರ್ ಅವರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೋಟೀಸ್ ನೀಡಿದ್ದಾರೆ ಎನ್ನಲಾಗಿದ್ದು, ಇದನ್ನು ಪ್ರಶ್ನಿಸಿ ಕುಮಾರಸ್ವಾಮಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಹೈಕೋರ್ಟ್, ಈ ವಿಚಾರದಲ್ಲಿ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಮುಂದಿನ ಆದೇಶದವರೆಗೆ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು’ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ರಾಮನಗರ ತಾಲ್ಲೂಕು ತಹಶೀಲ್ದಾರ್ ಅವರಿಗೆ ನ್ಯಾಯಪೀಠ ಆದೇಶಿಸಿದ್ದು, ಇದರಿಂದಾಗಿ ಕುಮಾರಸ್ವಾಮಿ ಸ್ವಲ್ಪ ನಿರಾಳರಾಗಿದ್ದಾರೆ.