ಬೆಳಗಾವಿ : ಕುರುಬ ಸಮುದಾಯಕ್ಕೆ ಎಸ್‍ಟಿ ಸೌಲಭ್ಯ ನೀಡದಿದ್ದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂಬ ಸ್ಪಸಂದೇಶವನ್ನು ಪರೋಕ್ಷವಾಗಿ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ರವಾನಿಸಿದ್ದಾರೆ.
ಬೆಳಗಾವಿಯಲ್ಲಿ ಹಾಲುಮತ ಸಮಾಜದ ಮೂಲ ಗುರುಮಠಗಳ, ಗುರು ಪೀಠಗಳಲ್ಲಿರುವ ಒಡೆಯರ್’ಗಳ, ಗುರುವಿನವರ, ತಾತಗಳ ಮಹತ್ವದ ಸಭೆ ಶನಿವಾರ ನಡೆಯಿತು. ಈ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಕಾಗಿನೆಲೆಯ ನಿರಂಜನಾನಂದಪುರಿ ಸ್ವಾಮೀಜಿ, ಈಗಾಗಲೇ ಸಮಾಜದ ಮುಖಂಡರ ನೇತೃತ್ವದಲ್ಲಿ ಕೇಂದ್ರ ಸಚಿವರು, ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ. ಜೊತೆಗೆ ಬೇಡಿಕೆ ಈಡೇರಿಕೆಗಾಗಿ ಹಂತ ಹಂತವಾಗಿ ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಜನವರಿ 15ರಂದು ಸೂರ್ಯ ತನ್ನ ದಿಕ್ಕನ್ನು ಬದಲಾಯಿಸುವ ಸಂಕ್ರಮಣ ದಿನ, ಆ ದಿನವೇ ಕುರುಬರ ದಿಕ್ಕನ್ನು ಬದಲಾಯಿಸಲಿ ಎಂಬ ಆಲೋಚನೆ ಇಟ್ಟುಕೊಂಡು ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಸುಮಾರು 340 ಕಿ.ಮಿ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಸ್ವಾಮೀಜಿ ಹೇಳಿದರು.
ಹೋರಾಟಕ್ಕೆ ಈಶ್ವರಪ್ಪ ಬೆಂಬಲ
ಇದೇ ವೇಳೆ, ಜನವರಿ 15ರಿಂದ ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಸಮಾಜದ ಸಹಸ್ರ ಸಹಸ್ರ ಜನರು ಸೇರಬೇಕು. ಕೊನೆ ದಿನ ಬೆಂಗಳೂರಿನಲ್ಲಿ 10 ಲಕ್ಷ ಜನರನ್ನು ಸೇರಿಸುವ ಮೂಲಕ ನಮ್ಮ ಶಕ್ತಿ ಪ್ರದರ್ಶನ ಮಾಡೋಣ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕರೆ ನೀಡಿದರು.
ಈಶ್ವರಾನಂದ ಸ್ವಾಮೀಜಿ, ಅವಧೂತಸಿದ್ಧ ಸ್ವಾಮೀಜಿ, ಬಸವರಾಜ್ ಬಸಲಿಗುಂಡಿ, ಮಾದಪ್ಪ ಮೆಟುರನವರ ಸೇರಿದಂತೆ ಸಮಾಜದ ವಿವಿಧ ಸ್ವಾಮೀಜಿಗಳು, ಸಮಾಜದ ಮುಖಂಡರು ಉಪಸ್ಥಿತರಿದ್ದರು.

























































