ಬೆಂಗಳೂರು: KSRTC ಯಲ್ಲಿ ನೂತನ ಲಗೇಜ್ ನಿಯಮ ಜಾರಿ ವಿಚಾರ ಸತ್ಯಕ್ಕೆ ದೂರವಾದುದು ಎಂದು ನಿಗಮದ ಸ್ಪಷ್ಟನೆ ನೀಡಿದೆ.
ಸಾಮಾಜಿಕ ಜಾಲತಾಣ ಮತ್ತು ಕೆಲವೊಂದು ಮಾಧ್ಯಮಗಳಲ್ಲಿ KSRTCಯಲ್ಲಿ ನೂತನ ಲಗೇಜ್ ನಿಯಮ ಜಾರಿ ಎಂದು ಪ್ರಕಟವಾಗಿದೆ. ಆದರೆ ಅದು ಸತ್ಯಕ್ಕೆ ದೂರವಾಗಿರುತ್ತದೆ ಎಂದು ನಿಗಮವು ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದೆ.
ನಿಗಮದ ಬಸ್ಸುಗಳಲ್ಲಿ ಸಾರ್ವಜನಿಕ ಪ್ರಯಾಣಿಕರ ಲಗೇಜ್ / ಸರಕುಗಳನ್ನು ಸಾಗಿಸಲು ಹಿಂದಿನಿಂದಲೂ ವ್ಯವಸ್ಥೆ ಜಾರಿಯಿದೆ. ಅಂದರೆ ವಾಷಿಂಗ್ ಮಷಿನ್, ಫ್ರಿಡ್ಜ್, ಟ್ರಕ್ ಟಯರ್, ಅಲ್ಯೂಮಿನಿಯಂ ಪೈಪ್, ಕಬ್ಬಿಣದ ಪೈಪ್, ಪಾತ್ರೆ, ಬೆಕ್ಕು, ನಾಯಿ, ಮೊಲಗಳನ್ನು ಸಾಗಿಸಲು ಅವಕಾಶಗಳನ್ನು 05.11.1999 ರಿಂದಲೇ (ಬಸ್ಸಿನಲ್ಲಿರುವ ಸ್ಥಳಾವಕಾಶಕ್ಕೆ ಅನುಗುಣವಾಗಿ) ನಿಗಮದಲ್ಲಿ ಜಾರಿಯಲ್ಲಿದೆ.
ಈ ವ್ಯವಸ್ಥೆಯ ಅನುಷ್ಠಾನದಲ್ಲಿ ಕಾಲದಿಂದ ಕಾಲಕ್ಕೆ ದರಗಳ ಪರಿಷ್ಕರಣೆ, 30 ಕೆಜಿ ವರೆಗೆ ಲಗೇಜ್ ಕೊಂಡೊಯ್ಯಲು ಉಚಿತ ಅವಕಾಶ, ಸಾಗಿಸಬಹುದಾದ ವಸ್ತುಗಳ ಪ್ರಯಾಣ ಇತ್ಯಾದಿಗಳನ್ನು ಉಲ್ಲೇಖಿಸಿ ಪ್ರಸ್ತುತ 28.10.2022ರಿಂದ ಲಗೇಜ್ ನಿಯಮ / ಸುತ್ತೋಲೆ ಜಾರಿಯಲ್ಲಿದೆ.
ಈ ವಿಚಾರದಲ್ಲಿ ಇತ್ತೀಚೆಗೆ ಯಾವುದೇ ಹೊಸ ಲಗೇಜ್ ನಿಯಮ / ಸುತ್ತೋಲೆಯನ್ನು ನಿಗಮದಲ್ಲಿ ಜಾರಿಗೆ ತಂದಿರುವುದಿಲ್ಲ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸ್ಪಷ್ಟಪಡಿಸಿದೆ.