ಬೆಂಗಳೂರು: ದೇಶದ ಪ್ರತಿಷ್ಠಿತ ಸಾರ್ವಜನಿಕ ಸಾರಿಗೆ ಸಂಸ್ಥೆ KSRTC ಒಂದಿಲ್ಲೊಂದು ಸನ್ನಿವೇಶಗಳಿಂದ ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಳ್ಳುತ್ತಿದೆ. ಇತ್ತೀಚೆಗಷ್ಟೇ ಮಹಿಳಾ ಕಂಡೆಕ್ಟರ್ ಗರ್ಭಿಣಿ ಮಹಿಳೆಗೆ ಪ್ರಯಾಣದ ನಡುವೆ ಹೆರಿಗೆ ಮಾಡಿಸಿ ಗಮನಸೆಳೆದಿದ್ದರು. ಇದೀಗ ಮತ್ತೊಂದು ರೀತಿಯ ಸಾಹಸ ಮೂಲಕ ಕೆಎಸ್ಸಾರ್ಟಿಸಿ ಸಿಬ್ಬಂದಿ ಅಚ್ಚರಿಯ ಕೇಂದ್ರಬಿಂದುವಾಗಿದ್ದಾರೆ.
ಕೆಎಸ್ಸಾರ್ಟಿಸಿ ಚಾಲನಾ ಸಿಬ್ಬಂದಿಯು ಪ್ರಯಾಣಿಕನಿಂದ ರೂ.5 ಲಕ್ಷ ಹಣ ಕದ್ದು ಓಡುತ್ತಿದ್ದ ವ್ಯಕ್ತಿಯನ್ಬು ಸೆರೆಹಿಡಿದು ಹಣವನ್ನು ಮರಳಿಸಿದ ಸಾಹಸಮಯ ಘಟನೆ ನಡೆದಿದೆ. ಜೂನ್ 14ರಂದು ಬೆಂಗಳೂರು ಕೇಂದ್ರಿಯ ವಿಭಾಗದ ಘಟಕ-04ರ ವಾಹನ ಸಂಖ್ಯೆ:ಕೆಎ-57 ಎಫ್ 3975, ಬೆಂಗಳೂರು- ತಿರುನಲ್ಲಾರ್ ಮಾರ್ಗದಲ್ಲಿ ಕಾರ್ಯಾಚರಣೆಯಲ್ಲಿದ್ದಾಗ, ಆಸನ ಸಂಖ್ಯೆ 17-18 ರಲ್ಲಿ ಪ್ರಯಾಣಿಕರ ಸೋಗಿನಲ್ಲಿ ಕುಳಿತಿದ್ದ ವ್ಯಕ್ತಿ ಆಸನ ಸಂಖ್ಯೆ 29-30 ರಲ್ಲಿದ್ದ ಪ್ರಯಾಣಿಕ ದಂಪತಿಯು ಊಟಕ್ಕಾಗಿ ಬಸ್‌ನಿಂದ ಕೆಳಗಿಳಿದ ಸಂದರ್ಭದಲ್ಲಿ 5 ಲಕ್ಷ ರೂಪಾಯಿ ಗಣ ಕದ್ದು, ಎಲೆಕ್ಟ್ರಾನಿಕ್ ಸಿಟಿ ಸಿಗ್ನಲ್ ಬಳಿ ಇಳಿದು ಪರಾರಿಯಾಗಿದ್ದಾನೆ. ಇದನ್ನು ಗಮನಿಸಿದ ಚಾಲಕರಾದ ಮಂಜುನಾಥ್ ಮತ್ತು ನಿರ್ವಾಹಕ ಸೋಮಪ್ಪ ಟಿ. ಎನ್ ಅವರು, ಕಳ್ಳ ಪ್ರಯಾಣಿಕನನ್ನು ಬೆನ್ನಟ್ಟಿ ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಕೆಎಸ್ಸಾರ್ಟಿಸಿ ಸಿಬ್ಬಂದಿಯ ಸಮಯೋಚಿತ ಸಾಹಸದಿಂದಾಗಿ ತನಗೆ ಕಳುವಾದ ಹಣ ಸಿಕ್ಕಿದೆ ಎಂದು ಪ್ರಯಾಣಿಕ ತಿರುಮುರುಗನ್ ಅವರು ನಿಗಮದ ಪ್ರಮುಖರಿಗೆ ಇ-ಮೇಲ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ..
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್, ಸದರಿ ಸಿಬ್ಬಂದಿಯ ಸಮಯ ಪ್ರಜ್ಞೆ, ಧೈರ್ಯ, ಸಾಹಸ ಮತ್ತು ಪ್ರಯಾಣಿಕರ ಬಗೆಗಿನ ಕಾಳಜಿಯು ಪ್ರಶ್ನಾತೀತ. ಇಂತಹ ಸಿಬ್ಬಂದಿಯೇ ನಮ್ಮ ಸಂಸ್ಥೆಯ ಹೆಮ್ಮೆ ಮತ್ತು ಗೌರವ ಎಂದಿದ್ದಾರೆ. ಈ ಸಿಬ್ಬಂದಿಯ ಕಾರ್ಯವು ಇತರರಿಗೆ ಮಾದರಿಯಾಗಲಿ ಎಂದು ಅವರು ಅಭಿನಂಧಿಸಿದ್ದಾರೆ.


























































