ಬೆಂಗಳೂರು: ಪ್ರಜಾಸತ್ತೆಯ ಮಹಾಹಬ್ಬವಾಗಿರುವ ವಿಧಾನಸಭಾ ಚುನಾವಣೆ ಗರಿಗೆದರಿದೆ. ರಾಜಕೀಯ ಪಕ್ಷಗಳು, ರಾಜಕೀಯ ನೇತಾರರು ಮತಬೇಟೆಯಲ್ಲಿ ನಿರತರಾಗಿದ್ದರೆ, ಇತ್ತ ರಾಜ್ಯದ ಹೆಮ್ಮೆಯ ಸಾರಿಗೆ ಸಂಸ್ಥೆ ಮತದಾರರ ಮನಮುಟ್ಟುವ ಪ್ರಯತ್ನ ಮಾಡುತ್ತಿದೆ. ಇವರದ್ದು ಮತಯಾಚನೆ ಅಲ್ಲ, ಮತದಾನ ಜಾಗೃತಿಯ ಕೈಂಕರ್ಯ.
-
ಮತದಾನ ಏಕೆ ಮಾಡಬೇಕು?
-
ಮತದಾನ ಮಾಡುವ ಉದ್ದೇಶವೇನು?
-
ಪ್ರಜಾಸತ್ತೆಯಲ್ಲಿ ಮತದಾನ ಪ್ರಕ್ರಿಯೆಯ ಮಹತ್ವವೇನು?
ಈ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡುವ ಕಾರ್ಯಕ್ರಮ ಎಲ್ಲರ ಕುತೂಹಲದ ಕೇಂದ್ರಬಿಂದುವಾಯಿತು. ಚುನಾವಣೆಯಲ್ಲಿ ಮತದಾರರೇ ಪ್ರಭುಗಳು. ಸಂವಿಧಾನ ಕಲ್ಪಿಸಿಕೊಟ್ಟಿರುವ ಮತದಾನದ ಹಕ್ಕನ್ನು ಜನರು ಯಾಕೆ ಪ್ರಯೋಗಿಸಬೇಕು ಎಂಬಿತ್ಯಾದಿ ಮಹತ್ವಗಳನ್ನು ಸಾರುವ ಜಾಗೃತಿ ಕಾರ್ಯಕ್ರಮಕ್ಕೆ BMTC ನಿಗಮ ಮನ್ನುಡಿ ಬರೆದಿದೆ.
ಕರ್ನಾಟಕ ಚುನಾವಣಾ ಆಯೋಗ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸುವ ಸಲುವಾಗಿ ಶುಕ್ರವಾರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೇಂದ್ರ ಕಛೇರಿಯ ಮುಂಭಾಗದಲ್ಲಿ ಬಿಬಿಎಂಪಿಯವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಬಿಎಂಟಿಸಿಯ ಸಾಂಸ್ಕೃತಿಕ ಕಲಾ ಕುಟೀರದ ಕಲಾವಿದರು ಮತ್ತು ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು ‘ಮತದಾನ ಸಂಕಲ್ಪ ಬೀದಿ ನಾಟಕ’ ಪ್ರದರ್ಶಿಸಿದರು. ಟಿ.ಎಂ. ಬಾಲಕೃಷ್ಣರವರ ನಿರ್ದೇಶನದಲ್ಲಿ ಈ ಪ್ರದರ್ಶನ ನೀಡಲಾಯಿತು.
ಮತದಾನ ನಮ್ಮೆಲ್ಲರ ಹಕ್ಕು.. ಮೇ10ರಂದು ತಪ್ಪದೇ ಮತದಾನ ಮಾಡಿ, ಪ್ರಜಾಸತ್ತೆಯ ಹಬ್ಬದಲ್ಲಿ ಹೆಮ್ಮೆಯಿಂದ ಭಾಗಿಯಾಗಿ.. ಎಂಬ ಸಾಮಾಜಿಕ ಕಳಕಳಿಯ ಜಾಗೃತಿ ಕಾರ್ಯಕ್ರಮ ಇದಾಗಿತ್ತು.
ವೃಕ್ಷಾರಾಧನೆಯ ಸ್ಪರ್ಶ..
ಮತದಾನ ಜಾಗೃತಿಯನ್ನು ಜಾಥಾ, ಗಿಡ ನೆಡುವ ಕಾರ್ಯಕ್ರಮ ಮೂಲಕವೂ ಆಚರಿಸಲಾಯಿತು. ಮತದಾನ ಮಾಡಲು ಪ್ರತಿಯೊಬ್ಬರು ಪ್ರತಿಜ್ಞೆ ಮಾಡಿದ ಸನ್ನಿವೇಶ ಗಮನಸೆಳೆಯಿತು.
ಈ ಕಾರ್ಯಕ್ರಮದಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಜಿ ಸತ್ಯವತಿ, ಬಿಬಿಎಂಪಿ ವಿಶೇಷ ಆಯುಕ್ತರು ಜಯರಾಂ ರಾಯಪುರ, ಬಿಎಂಟಿಸಿ ನಿರ್ದೇಶಕ (ಮಾ.ತ) ಎ.ವಿ.ಸೂರ್ಯಸೇನ್, ದಕ್ಷಿಣ ವಲಯ ಬಿಬಿಎಂಪಿ ಉಪ ಆಯುಕ್ತ ಲಕ್ಷ್ಮಿ ಸಹಿತ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.