ಬೆಂಗಳೂರು: ಕಾನೂನು ವಿದ್ಯಾರ್ಥಿಗಳಿಗೆ ನ್ಯಾಯಾಲಯ ಕಲಾಪಗಳ ಸಂಪೂರ್ಣ ತಿಳುವಳಿಕೆ ಸಿಗುವಂತಾಗಲು ಪ್ರಾಯೋಗಿಕ ಶಿಕ್ಷಣದಲ್ಲಿ ಸುಧಾರಣೆ ತರಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸಿ. ಬಸವರಾಜು ತಿಳಿಸಿದ್ದಾರೆ.
ವೈದೇಹಿ ಕಾನೂನು ಸಂಸ್ಥೆಯ ವತಿಯಿಂದ ನಡೆದ ‘ಸಾಮಾಜಿಕ, ನ್ಯಾಯ ಮತ್ತು ಲಿಂಗ ಸಮಾನತೆ’ ಕುರಿತ ರಾಷ್ಟ್ರೀಯ ಸಮ್ಮೇಳನ ಮತ್ತು ವೈದೇಹಿ ಕಾನೂನು ಕಾಲೇಜಿನಲ್ಲಿ (Vydehi Institute of Law) ಹೊಸ ಮೂಟ್ ಕೋರ್ಟ್ ಹಾಲ್ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿ ಡಾ.ಸಿ. ಬಸವರಾಜು, ರಾಜ್ಯದ ಕಾನೂನು ಮಹಾವಿದ್ಯಾಲಯಗಳಲ್ಲಿ ಮೂಟ್ ಕೋರ್ಟ್ ವ್ಯವಸ್ಥೆಯು ನ್ಯಾಯಾಲಯ ಸ್ವರೂಪದ ವೇದಿಕೆಯಂತಿದ್ದರೂ ಕೂಡಾ, ತಜ್ಞರ ನಿರಂತರ ಮಾರ್ಗದರ್ಶನ ಅವಶ್ಯವಿದೆ. ಈ ನಿಟ್ಟಿನಲ್ಲಿ ಪರಿಪೂರ್ಣ ಶಿಕ್ಶಣ, ಮಾರ್ಗದರ್ಶನ ಅಗತ್ಯವಿದೆ. ಈ ರೀತಿಯ ಶಿಕ್ಷಣದಿಂದ ಕಾನೂನು ವಿದ್ಯಾರ್ಥಿಗಳು ಪಠ್ಯದ ಜೊತೆಗೆ ನ್ಯಾಯಾಂಗದ ಬಗ್ಗೆ ಪರಿಪೂರ್ಣ ತಿಳುವಳಿಕೆ ಹೊಂದಲು ಪೂರಕ ವ್ಯವಸ್ಥೆ ರೂಪಿಸಿದಂತಾಗುತ್ತದೆ ಎಂದು ಪ್ರತಿಪಾದಿಸಿದರು.
ಸಮಾರಂಭದಲ್ಲಿ ಅನೇಕ ಶಿಕ್ಷಣ ತಜ್ಞರು, ಸಂಶೋಧಕರು ಭಾಗವಹಿಸಿದ್ದರು. ಪ್ರಸಕ್ತ ರಾಜ್ಯ ಕಾನೂನು ವಿಶ್ವವಿದ್ಯಾಲಯ ದೇಶದಲ್ಲಿ ಅತ್ಯುತ್ತಮ ವಿಶ್ವವಿದ್ಯಾಲಯವಾಗಿ ಗುರುತಾಗಿದ್ದು ನ್ಯಾಯಾಂಗ ಕ್ಷೇತ್ರದಲ್ಲೂ ಪ್ರತಿಷ್ಠೆಯನ್ನೂ ಹೆಚ್ಚಿಕೊಂಡಿದೆ ಎಂದು ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದರು.
ವೈದೇಹಿ ಕಾನೂನು ಮಹಾವಿದ್ಯಾಲಯವು ಒಂದು ವರ್ಷದ ಚೊಚ್ಚಲ ಮಹಾವಿದ್ಯಾಲಯವಾಗಿದ್ದು ಸಾಮಾಜಿಕ, ನ್ಯಾಯ ಮತ್ತು ಲೈಂಗಿಕ ಸಮಾನತೆಯೆಂಬ ವಿಷಯದ ಬಗ್ಗೆ ವಿಚಾರ ಸಂಕೀರ್ಣ ಏರ್ಪಡಿಸಿರುವುದನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು ಹಾಗೂ ಭಾರತ ಸಂವಿಧಾನ ಜಾರಿಗೆ ಬಂದು 75 ವರ್ಷಗಳು ಕಳೆದರೂ ಸಾಮಾಜಿಕ ನ್ಯಾಯ ಎಲ್ಲ ವರ್ಗದವರನ್ನು ತಲುಪಲು ವಿಫಲವಾಗಿದೆಯೆಂದು ಕುಲಪತಿ ಪ್ರೊ.ಸಿ. ಬಸವರಾಜು ಗಮನಸೆಳೆದರು .
ಮಹಿಳೆಯರ ಶೋಷಣೆ, ಮಕ್ಕಳ ಶೋಷಣೆ, ಬಾಲ್ಯ ವಿವಾಹ ಪದ್ಧತಿ, ಅಸ್ಪಶ್ಯತೆ ಆಚರಣೆ, ಲೈಂಗಿಕ ಕಿರುಕುಳ ಅಗೌರವದ ಭಾವನೆ ಗಳಿಂದಾಗಿ ಕಾನೂನುಗಳು ಉಲ್ಲಂಘನೆಯಾಗುತ್ತಿವೆ. ಇದನ್ನು ನಿಯಂತ್ರಿಸುವ ಜವಾಬ್ದಾರಿ ಎಲ್ಲಾ ನಾಗರಿಕರ ಮೇಲೆ ಇದೆ. ಅದರಲ್ಲೂ ಕಾನೂನು ಕ್ಷೇತ್ರದಲ್ಲಿ ಸೇವೆ ಮಾಡುವ ಕಾನೂನು ವಿದ್ಯಾರ್ಥಿಗಳು, ಕಾನೂನು ಅಧ್ಯಾಪಕರು, ನ್ಯಾಯವಾಧಿಗಳು, ನ್ಯಾಯಮೂರ್ತಿಗಳು ಹಾಗೂ ನ್ಯಾಯ ಪಂಡಿತರ ಜವಾಬ್ದಾರಿಗಳು ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು. ಎಲ್ಲಿಯವರೆಗೆ ಸಮಾಜದಲ್ಲಿ ಉತ್ತಮವಾದಂತಹ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬೆಳೆಸುವುದಿಲ್ಲವೋ ಅಲ್ಲಿಯ ತನಕ ಅಪರಾಧಗಳ ಸಂಖ್ಯೆ ಹಾಗೂ ಕಾನೂನುಗಳ ಉಲ್ಲಂಘನೆ ನಿರಂತರವಾಗಿ ಇರುತ್ತದೆ ಎಂದವರು ಹೇಳಿದರು.
ಸಮಾರಂಭ ಉದ್ಘಾಟಿಸಿದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್, ವೈದೇಹಿ ಕಾನೂನು ಮಹಾವಿದ್ಯಾಲಯದ ಒಂದು ವರ್ಷದ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದುವರೆದು ಮಾತನಾಡುತ್ತ ಇಂದಿನ ಪ್ರಸ್ತುತ ಸಮಯದಲ್ಲಿ ಕಾನೂನು ಶಿಕ್ಷಣ ಮಹತ್ತರ ಪಾತ್ರವಹಿಸಿದ್ದು ಸಮಾಜದ ಎಲ್ಲ ಕಾನೂನಾತ್ಮಕವಾದ ಸಮಸ್ಯೆಗಳಿಗೆ ಪರಿಹಾರ ನೀಡಲು ಅಗತ್ಯವಾಗಿದೆಯೆಂದು ತಿಳಿಹೇಳಿದರು.