ಬೆಂಗಳೂರು: ಬಿಜೆಪಿ ನಾಯಕ ಕೆ.ಪಿ.ನಂಜುಂಡಿ ಅವರು ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಲೋಕಸಭಾ ಚುನಾವಣೆ ನಡೆಯುತ್ತಿರುವಾಗಲೇ ವಿಶ್ವಕರ್ಮ ಸಮುದಾಯದ ಪ್ರಭಾವಿ ನಾಯಕ ಕೆ.ಪಿ.ನಂಜುಂಡಿ ಅವರು ಬಿಜೆಪಿಗೂ ಗುಡ್ ಬೈ ಹೇಳಿರುವ ವಿದ್ಯಮಾನ ತೀವ್ರ ಕುತೂಹಲ ಕೆರಳುವಂತೆ ಮಾಡಿದೆ.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಕ್ಷೇತ್ರಗಳನ್ನೂ ಗೆಲ್ಲುವುದಾಗಿ ಬಿಜೆಪಿ ನಾಯಕರು ಸಾರಿಹೇಳುತ್ತಿದ್ದರೆ ಮತ್ತೊಂದೆಡೆ, ವಿಶ್ವಕರ್ಮ ಸಮುದಾಯದ ಪ್ರಭಾವಿ ನಾಯಕ ಕೆ.ಪಿ.ನಂಜುಂಡಿ ಅವರು ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ. ಬುಧವಾರ ಅವರು ಕಾಗ್ರೇಸ್ ಪಕ್ಷ ಸೇರಲಿದ್ದಾರೆ. ಈ ಮೂಲಕ ಅವರು ಕಾಂಗ್ರೆಸ್ ಪಕ್ಷಕ್ಕೆ ಘರ್ ವಾಪ್ಸಿ ಆಗಲಿದ್ದಾರೆ.
ಆರು ವರ್ಷದಿಂದ ಬಿಜೆಪಿಯಲ್ಲಿದ್ದು ವಿಧಾನಪರಿಷತ್ ಸದಸ್ಯರಾಗಿದ್ದ ಉದ್ಯಮಿ ಕೆ.ಪಿ.ನಂಜುಂಡಿ ಮಂಗಳವಾರ ದಿಢೀರ್ ಆಗಿ ಹುಬ್ಬಳ್ಳಿಗೆ ತೆರಳಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಖುದ್ದು ಭೇಟಿಯಾಗಿ ತಮ್ಮ ಅಚ್ಚರಿಯ ನಿರ್ಧಾರವನ್ನು ಹೇಳಿಕೊಂಡಿದ್ದಾರೆ. ವಿಧಾನ ಪರಿಷತ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ಅವರು ಸಲ್ಲಿಸಿದರು. ಮೇಲ್ಮನೆ ಸದಸ್ಯತ್ವ ಅವಧಿ ಇನ್ನೂ ಎರಡು ತಿಂಗಳು ಇರುವಾಗಲೇ ನಂಜುಂಡಿ ಅವರು ಈ ಹುದ್ದೆಯನ್ನು ತ್ಯಜಿಸಿದ್ದಾರೆ.
ಚಲನಚಿತ್ರ ಕ್ಷೇತ್ರದ ದಿಗ್ಗಜರಲ್ಲೊಬ್ಬರಾಗಿರುವ ಕೆ.ಪಿ.ನಂಜುಂಡಿ ಅವರು ಸಿನಿಮಾ ಮಾತ್ರವಲ್ಲ, ಕಿರುತೆರೆ ಧಾರವಾಹಿ, ನಿರ್ಮಾಣ ಕ್ಷೇತ್ರದಲ್ಲೂ ಹೆಸರು ಮಾಡಿರುವವರು. ಅದರಲ್ಲೂ ರಾಜ್ಯದ ಬಲಿಷ್ಠ ಸಮುದಾಯವಾಗಿರುವ ವಿಶ್ವಕರ್ಮ ಸಮಾಜದ ಒಗ್ಗಟ್ಟಿಗಾಗಿ ವಿಶ್ವಕರ್ಮ ಮಹಾಸಭಾವನ್ನು ಕಟ್ಟಿ ಸಂಘಟಿಸಿದ ಹೆಗ್ಗಳಿಕೆಯೂ ಕೆ.ಪಿ.ನಂಜುಂಡಿ ಅವರದ್ದು. ವಿಶ್ವಕರ್ಮ ಸಮುದಾಯದ ಪ್ರಭಾವಿ ನಾಯಕರಾಗಿರುವ ಕೆ.ಪಿ.ನಂಜುಂಡಿ ಅವರನ್ನು ತಮ್ಮ ಪಕ್ಷಕ್ಕೆ ಸೆಳೆದ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಗೆ ಬಾರಮಾಡಿಕೊಂಡು, ಪರಿಷತ್ ಸದಸ್ಯರನ್ನಾಗಿ ಮಾಡಿದ್ದರು. ಅನಂತರದ ಇಷ್ಟೂ ಕಾಲ ಬಿಎಸ್ವೈ ಬಳಗದಲ್ಲಿ ಗುರುತಿಸಿಕೊಂಡಿದ್ದ ಕೆ.ಪಿ.ನಂಜುಂಡಿ ಅವರು ಇದೀಗ ಬದಲಾದ ಪರಿಸ್ಥಿತಿಯಲ್ಲಿ ಪರಿಷತ್ ಶಾಸಕ ಸ್ಥಾನಕ್ಕೆ ಹಾಗೂ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ತಮ್ಮನ್ನು ಎಂಎಲ್ಸಿ ಮಾಡಿದ್ದರೂ ಯಾವುದೇ ಜವಾಬ್ಧಾರಿ ನೀಡದೆ ಕಡೆಗಣಿಸಲಾಗಿದೆ. ಇದರಿಂದ ನಮ್ಮ ಸಮುದಾಯಕ್ಕೂ ಅನ್ಯಾಯವಾಗಿದೆ. ಹಾಗಾಗಿ ಬಿಜೆಪಿ ತೊರೆಯುವಂತೆ ನಮ್ಮ ಸಮಾಜದ ಬಂಧುಗಳು ಒತ್ತಾಯಿಸುತ್ತಲೇ ಇದ್ದರು. ಇದೀಗ ಅವರ ಸಲಹೆಯಂತೆ ಬಿಜೆಪಿಗೆ ರಾಜೀನಾಮೆ ನೀಡಿರುವುದಾಗಿ ಕೆ.ಪಿ.ನಂಜುಂಡಿ ತಿಳಿಸಿದರು.
ಬುಧವಾರ ಕಾಂಗ್ರೆಸ್ ಸೇರ್ಪಡೆ:
ಕಾಂಗ್ರೆಸ್ ನೊಂದಿಗೆ ಸಂಪರ್ಕದಲ್ಲಿದ್ದ ಕೆ.ಪಿ.ನಂಜುಂಡಿ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೂ ಮೂರ್ನಾಲ್ಕು ಸುತ್ತಿನಲ್ಲಿ ಮಾತುಕತೆ ನಡೆಸಿದ್ದರು. ಬೆಂಗಳೂರು ಮಾತ್ರವಲ್ಲ, ಮೈಸೂರು ಸಹಿತ ರಾಜ್ಯದಲ್ಲೆಡೆ ವಿಶ್ವಕರ್ಮ ಮಹಾಸಭಾದ ಘಟಕಗಳನ್ನು ಹೊಂದಿರುವ ಕೆ.ಪಿ.ನಂಜುಂಡಿ ಅವರು ಪ್ರಬಲ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿಸುವ ಭರವಸೆ ಡಿ.ಕೆ.ಶಿವಕುಮಾರ್ ಅವರಿಂದ ಸಿಕ್ಕಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೆ.ಪಿ.ನಂಜುಂಡಿ ಅವರು ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.