ಕೋಲಾರ: ಸೋಂಕಿತರಿಗೆ ಆಕ್ಸಿಜನ್ ಸಿಗುತ್ತಿಲ್ಲ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿರುವಂತೆಯೇ ಸರ್ಕಾರ ಸೂಕ್ತ ವ್ಯವಸ್ಥೆಗೆ ಕ್ರಮವಹಿಸುತ್ತಿದೆ. ಈ ಸಂಬಂಧ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರ ಕೋಲಾರ ಜಿಲ್ಲಾ ಬೇಟಿ ಗಮನಸೆಳೆಯಿತು. ಕೋಲಾರದ ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕದ ಸಮಸ್ಯೆ ಉಂಟಾಗಿ ಸೋಮವಾರ ರಾತ್ರಿ ನಾಲ್ವರು ಸಾವನ್ನಪ್ಪಿದ ಘಟನೆ ಹಿನ್ನೆಲೆಯಲ್ಲಿ ಕೋಲಾರಕ್ಕೆ ಮಂಗಳವಾರ ಬೇಟಿ ನೀಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಜಿಲ್ಲೆಯ ಇಡೀ ಕೋವಿಡ್ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದರು.
ಕೋವಿಡ್ ಎರಡನೇ ಅಲೆಯಿಂದ ಜಿಲ್ಲೆಯೂ ಸಾಕಷ್ಟು ಸಮಸ್ಯೆಗೀಡಾಗಿದ್ದು ಆಮ್ಲಜನಕ, ರೆಮಿಡಿಸ್ವಿರ್, ಐಸಿಯು ಹಾಸಿಗೆಗಳು, ವೆಂಟಿಲೇಟರ್, ರಿಮೋಟ್ ಐಸಿಯು, ಕೋವಿಡ್ ಪರೀಕ್ಷೆ, ಫಲಿತಾಂಶ ಮತ್ತಿತರೆ ಸೌಲಭ್ಯಗಳ ಬಗ್ಗೆ ಅವರು ಪರಿಶೀಲನೆ ಮಾಡಿದರಲ್ಲದೆ, ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಜತೆಗೆ, ಆಸ್ಪತ್ರೆ ಹಾಗೂ ಕೋವಿಡ್ ವಾರ್ ರೂಂನಲ್ಲಿರುವ ಕೊರತೆಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡರು. ಜತೆಗೆ, ವಾರ್ ರೂಮ್ ಸಿಬ್ಬಂದಿ ಜತೆ ಸಮಾಲೋಚನೆಯನ್ನೂ ನಡೆಸಿದರು.
ಕೋಲಾರದಲ್ಲಿರುವ ಡಿಜಿಟಲ್ ಅರೋಗ್ಯ ವಾಹಿನಿಯಲ್ಲಿರುವ ಕೋವಿಡ್ ವಾರ್ ರೂಮಿಗೆ ಭೇಟಿ ನೀಡಿದರಲ್ಲದೆ, ಎರಡನೇ ಅಲೆ ತಡೆಗಟ್ಟುತ್ತಿರುವ ವಿಧಾನವನ್ನು ಪರಿಶೀಲಿಸಿದರು. ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿರವವರ ಬಗ್ಗೆ ಮಾಹಿತಿ ಪಡೆದರಲ್ಲದೆ, ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆ, ಅದನ್ನು ಮತ್ತಷ್ಟು ಉತ್ತಮಪಡಿಸುವ ಬಗ್ಗೆ ವೈದ್ಯರಿಗೆ ಸಲಹೆ ನೀಡಿದರು.