ರೈತರ ಪರ ನಿಂತಿರುವ ಕೇಂದ್ರ ಸರ್ಕಾರಕ್ಕೆ ವಂಚಕರ ಸವಾಲ್.. ‘ಕಿಸಾನ್ ಸಮ್ಮಾನ್ ನಿಧಿ ಯೋಜನೆ’ ಹಣ ಮಾಫಿಯಾ ಪಾಲು.. ನರೇಂದ್ರ ಮೋದಿಯ ಮಹತ್ವಾಕಾಂಕ್ಷೆಯ ಯೋಜನೆ ಹಳಿತಪ್ಪಲು ಕಾರಣರಾದರೇ ಅಧಿಕಾರಿಗಳು.. ‘ಸಿಟಿಜನ್ ರೈಟ್ಸ್’ ಪತ್ರದಲ್ಲಿ ಬಹಿರಂಗವಾದ ಸಂಗತಿಗಳೇನು..?
ಬೆಂಗಳೂರು: ಭ್ರಷ್ಟಾಚಾರ ವಿರುದ್ದ ಸಮರ ಸಾರಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಯೋಜನೆಗಳನ್ನು ನಿಗೂಢ ಮಾಫಿಯಾವು ಹಳಿತಪ್ಪಿಸಲು ಯತ್ನ ನಡೆಸುತ್ತಿದೆ. ಅದರಲ್ಲೂ ಮೋದಿಯವರ ಮಹತ್ವಾಕಾಂಕ್ಷೆಯ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ’ಯ ಹಣವನ್ನು ಲೂಟಿ ಮಾಡುವ ಕೃತ್ಯ ನಡೆದಿದ್ದು ಈ ಬಗ್ಗೆ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಕೇಂದ್ರ ಸರ್ಕಾರದ ಗಮನ ಸೆಳೆದಿದೆ. ಈ ಕೃತ್ಯದಲ್ಲಿ ಸರ್ಕಾರದ ಜೊತೆಗಿರುವ ಅಧಿಕಾರಿಗಳು ಶಾಮೀಳಾಗಿದ್ದು ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಸಿಟಿಜನ್ ರೈಟ್ಸ್ ಫೌಂಡೇಷನ್ ಅಧ್ಯಕ್ಷ ಕೆ.ಎ.ಪಾಲ್ ಅವರು ಒತ್ತಾಯಿಸಿದ್ದಾರೆ. ಈ ಸಂಬಂಧ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು (08.08.2022) ಬರೆದಿರುವ ಪತ್ರ ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ.
‘ಪಾಲ್’ ಪತ್ರದಲ್ಲಿ ಏನಿದೆ..?
ಭ್ರಷ್ಟಾಚಾರ ಮುಕ್ತ ಆಡಳಿತ ಸೂತ್ರದಲ್ಲಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿರುವ ತಮ್ಮ ನೇತೃತ್ವದ ಸರ್ಕಾರ ಬಡಪಾಯಿಗಳ ಉದ್ಧಾರಕ್ಕಾಗಿ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದು ದೇಶದ ಅಭಿವೃದ್ಧಿಯತ್ತ ಕ್ರಾಂತಿಕಾರಿ ಹೆಜ್ಜೆ ಎಂಬುದು ಸ್ಪಷ್ಟ. ಆದರೆ, ಅಧಿಕಾರಿಗಳ ಹಂತದಲ್ಲಿ ಈ ಯೋಜನೆ ಹಳಿತಪ್ಪುತ್ತಿರುವುದು ವಿಷಾದದ ಸಂಗತಿ ಎಂದು ಈ ಪತ್ರದಲ್ಲಿ ಪ್ರಧಾನಿಯವರ ಗಮನಸೆಳೆದಿರುವ ಕೆ.ಎ.ಪಾಲ್, ತಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ‘ಕಿಸಾನ್ ಸಮ್ಮಾನ್ ಯೋಜನೆಯಲ್ಲಾಗಿರುವ ಭ್ರಷ್ಟಾಚಾರದ ಬಗ್ಗೆ ಹಾಗೂ ಇದರ ಫಲ ಭ್ರಷ್ಟ ಮಾಫಿಯಾದ ಪಾಲಾಗುತ್ತಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಪ್ರತೀ ವರ್ಷ ಕೋಟ್ಯಾಂತರ ರೂಪಾಯಿ ಹಣವು ನಕಲಿ ಫಲಾನುಭವಿಗಳ ಪಾಲಾಗುತ್ತಿದೆ ಎಂಬ ಸಂಗತಿಯನ್ನು ಉಲ್ಲೇಖಿಸಿದ್ದಾರೆ.
ಸಂಕಷ್ಟದಿಂದ ಬೇಸತ್ತು ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯುವ ಸದುದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಗುಜರಾತ್‌ನಲ್ಲಿ ತಾವು ಸಿಎಂ ಆಗಿದ್ದಾಗ ಕೈಗೊಂಡ ರೈತಹಿತ ಕಾರ್ಯಕ್ರಮದ ಸುಧಾರಿತ ಹೆಜ್ಜೆಯೇ ಈ ‘ಪಿಎಂ ರೈತ ಸಮ್ಮಾನ್ ನಿಧಿ ಯೋಜನೆ’ ಎಂಬುದರಲ್ಲಿ ಎರಡು ಮಾತಿಲ್ಲ. ವಾರ್ಷಿಕ 6,000 ರೂಪಾಯಿ ಹಣವನ್ನು ಮೂರು ಕಂತುಗಳಲ್ಲಿ ವ್ಯವಸಾಯಿಕ ದೇಶವಾಸಿಗಳಿಗೆ ನೀಡುತ್ತಿದ್ದೀರಿ. ತಮ್ಮ ಈ ನಿರ್ಧಾರದಿಂದ ಪ್ರಭಾವಿತವಾದ ಕರ್ನಾಟಕ ಸಹಿತ ಹಲವು ರಾಜ್ಯಗಳ ಸರ್ಕಾರಗಳೂ ಸುಮಾರು 4,000 ರೂಪಾಯಿಗಳನ್ನು ತಮ್ಮ ಪಾಲಿನ ರೂಪದಲ್ಲಿ ಸೇರಿಸಿವೆ. ಈ ಮೂಲಕ ಯೋಜನೆಯ ಫಲಾನುಭವಿ ಪಟ್ಟಿಯಲ್ಲಿರುವ ಮಂದಿಗೆ ವಾರ್ಷಿಕ ತಲಾ 10,000 ರೂಪಾಯಿ ಸಂದಾಯವಾಗುತ್ತಿದೆ. ಆದರೆ ಈ ಫಲಾನುಭವಿ ಪಟ್ಟಿಯಲ್ಲಿದ್ದು ಹಣ ಪಡೆಯುವವರ ಪೈಕಿ ಬಹುಪಾಲು ಮಂದಿ ನಕಲಿ ರೈತರು ಎಂಬುದು ಕಳವಳಕಾರಿ ವಿಷಯ ಎಂದು ಪ್ರಧಾನಿಯವರಿಗೆ ರಹಸ್ಯ ವೀಡಿಯೋವನ್ನು ಸಾಕ್ಷಿಯಾಗಿರಿಸಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ವರೆಗೂ ಸುಮಾರು 12 ಕಂತುಗಳಲ್ಲಿ ಕಿಸಾನ್ ಸಮ್ಮಾನ್ ಯೋಜನಾ ಹಣ ಫಲಾನುಭವಿಗಳ ಪಟ್ಟಿಯಲ್ಲಿರುವವರಿಗೆ ಬಿಡುಗಡೆಯಾಗಿದೆ. ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ DBS ಮೂಲಕ ನೇರ ಪಾವತಿಯಾಗುತ್ತಿರುವುದರಿಂದ ಈ ಅಕ್ರಮ ಫಲಾನುಭವಿಗಳ ವಿಚಾರದಲ್ಲಿ ಮತ್ತೆ ಮತ್ತೆ ಪರಾಮರ್ಷೆಗೆ ಅವಕಾಶ ಸಿಗುತ್ತಿಲ್ಲ. ಆದರೆ ರೈತರೇ ಅಲ್ಲದ, ಆ ಪ್ರದೇಶದಲ್ಲೇ ಇಲ್ಲದ ಮಂದಿಯ ಹೆಸರಲ್ಲಿನ ಖಾತೆಗಳಿಗೆ ಸಂದಾಯವಾಗುವ ಈ ಹಣ ಅಂತಿಮವಾಗಿ ಯಾರ ಕೈ ಸೇರುತ್ತದೆ ಎಂಬುದೇ ನಿಗೂಢವಾಗಿದೆ ಎಂದಿರುವ ‘ಸಿಟಿಜನ್ ರೈಟ್ಸ್’ ಮುಖ್ಯಸ್ಥರು, ಕೋರುವುದೇನೆಂದರೆ, ನಿಮ್ಮದು ರೈತಪರ ಹೆಜ್ಜೆ, ಭ್ರಷ್ಟಾಚಾರ ಮುಕ್ತ ನಡೆ. ಹಾಗಾಗಿ ಈ ಪ್ರಕರಣದಲ್ಲಿ ಯೋಜನೆಯು ಹಳಿ ತಪ್ಪುವಂತಾಗಲು ಕಾರಣರಾಗಿರುವವರನ್ನು ಗುರುತಿಸಬೇಕು. ಹಾಗೂ ನ್ಯಾಯಾಂಗ ಸಮಿತಿಯಂತಹಾ ಉನ್ನತ ಮಟ್ಟದ ತಂಡ ರಚಿಸಿ ತನಿಖೆ ನಡೆಸಬೇಕೆಂದು ಪ್ರಧಾನಿ ಮಂತ್ರಿಗಳನ್ನು ಒತ್ತಾಯಿಸಿದ್ದಾರೆ.