ಬೆಂಗಳೂರು: ಅಗತ್ಯ ಸೇವೆಯ ಪ್ರವರ್ಗದ ಅಡಿ ಮಾಧ್ಯಮ ವರ್ಗದವರ ಅಂಚೆ ಮತಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಾಧ್ಯಮದವರಿಗೆ ಅಂಚೆ ಮತದಾನಕ್ಕೆ ಅವಕಾಶವಿದ್ದರೂ ಪತ್ರಕರ್ತರು ಈ ಅವಕಾಶದಿಂದ ವಂಚಿತರಾಗ್ತಾರ ಎಂಬ ಆತಂಕ ಎದುರಾಗಿದೆ. ಈ ಸಂಬಂಧ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಅವರು ಚುನಾವಣಾ ಆಯೋಗಕ್ಕೆ ನೀಡಿರುವ ಮನವಿ ಕುತೂಹಲದ ಕೇಂದ್ರಬಿಂದುವಾಗಿದೆ.
ರಮೇಶ್ ಬಾಬು ಅವರ ಮನವಿ ಪತ್ರದಲ್ಲೇನಿದೆ?
ನಮ್ಮ ರಾಜ್ಯದಲ್ಲಿ ಪ್ರಥಮಬಾರಿಗೆ ಕೇಂದ್ರ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಾದ್ಯಮದಲ್ಲಿ ತೊಡಗಿಸಿಕೊಂಡಿರುವ ಪತ್ರಕರ್ತರಿಗೆ ಅಗತ್ಯ ಸೇವೆಯ ಪ್ರವರ್ಗದ ಅಡಿಯಲ್ಲಿ ಅಂಚೆ ಮತ ಚಲಾಯಿಸಲು ಅವಕಾಶ ಕಲ್ಪಿಸಿರುತ್ತದೆ. ಚುನಾವಣಾ ಆಯೋಗವು ಈ ಅವಕಾಶದ ಅಡಿಯಲ್ಲಿ ನಮೂನೆ 12D ಮೂಲಕ ಪತ್ರಕರ್ತರು ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಬೆಂಗಳೂರಿನಲ್ಲಿ ಮತ್ತು ಇತರೆ ಕೇಂದ್ರಗಳಲ್ಲಿ ತಮ್ಮ ಮತ ಚಲಾವಣೆಗೆ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ರಾಜ್ಯದಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಮತ್ತು ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಈ ಮೂಲಕ ಪತ್ರಕರ್ತರಿಗೆ ಅವಕಾಶ ನೀಡಲಾಗಿರುತ್ತದೆ. ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಮಾಧ್ಯಮಗಳ ಪತ್ರಕರ್ತರ ನಮೂನೆ 12D ಅನ್ನು ನಿಗದಿತ ಸಮಯದಲ್ಲಿ ಅವಶ್ಯಕ ದಾಖಲೆಗಳೊಂದಿಗೆ ಪಡೆದುಕೊಂಡಿರುತ್ತಾರೆ. ಆದರೆ ನಿಗದಿತ ಸಮಯದಲ್ಲಿ ಸದರಿ ನಮೂನೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡದೇ ನಿರ್ಲಕ್ಷ್ಯ ಮಾಡಿರುತ್ತಾರೆ. ಪತ್ರಕರ್ತರು ನಿಗದಿತ ಸಮಯದಲ್ಲಿ ತಮ್ಮ ದಾಖಲೆಗಳೊಂದಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿದ್ದರೂ ಅಧಿಕಾರಿಗಳ ತಪ್ಪಿನಿಂದ ಅದು ಚುನಾವಣಾ ಅಧಿಕಾರಿಗಳಿಗೆ ಅದು ತಲುಪಿರುವುದಿಲ್ಲ ಎಂದು ಮಾಜಿ ಶಾಸಕ ರಮೇಶ್ ಬಾಬು ಅವರು ಮುಖ್ಯ ಚುನಾವಣಾಧಿಕಾರಿಗೆ ನೀಡಿರುವ ಮನವಿ ಪತ್ರದಲ್ಲಿ ಗಮನಸೆಳೆದಿದ್ದಾರೆ.
ಚುನಾವಣಾ ಆಯೋಗವು ಕೂಡಲೇ ಸಂಬಂಧಪಟ್ಟ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಮತ್ತು ಬಿಬಿಎಂಪಿ ವ್ಯಾಪ್ತಿಯ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಿ ಅಗತ್ಯ ಸೇವೆಗಳ ಪ್ರವರ್ಗದ ಅಡಿಯಲ್ಲಿ ನಮೂನೆ 12D ಸಲ್ಲಿಕೆ ಮಾಡಿರುವ ಪತ್ರಕರ್ತರ ಅರ್ಜಿಗಳನ್ನು ಪರಿಗಣಿಸಿ ಇವರು ಅಂಚೆ ಮತ ಚಲಾವಣೆ ಮಾಡಲು ಅವಕ್ಷ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಜನಸಾಮಾನ್ಯರ ದ್ವನಿಗಳನ್ನು ಸರ್ಕಾರಕ್ಕೆ ತಲುಪಿಸುವ ವ್ಯವಸ್ಥಿತವಾದ ಜವಾಬ್ದಾರಿಯನ್ನು ನಿರ್ವಹಣೆ ಮಾಡುತ್ತಿರುವ ಪತ್ರಕರ್ತರಿಗೆ ಅವರ ಮತ ಚಲಾವಣೆ ಮಾಡಲು ಅವಕಾಶ ಕಲ್ಪಿಸುವುದು ಚುನಾವಣಾ ಆಯೋಗದ ಕರ್ತವ್ಯವಾಗಿದ್ದು, ಈ ವಿಷಯವನ್ನು ಆದ್ಯತೆಯ ಮೇಲೆ ಪರಿಗಣಿಸಿ ಬೆಂಗಳೂರಿನಲ್ಲಿ ಮತ್ತು ಇಡೀ ರಾಜ್ಯದಲ್ಲಿ ಪತ್ರಕರ್ತರು ಅಂಚೆ ಮತ ಚಲಾವಣೆ ಮಾಡಲು ಅವಕಾಶ ಕಲ್ಪಿಸಬೇಕಿದೆ ಎಂದು ರಮೇಶ್ ಬಾಬು ಅವರು ಚುನಾವಣಾಧಿಕಾರಿಗೆ ಮನವಿ ಮಾಡಿದ್ದಾರೆ.