ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೆ ಬದಲಾವಣೆಯ ಸುಳಿವು ವ್ಯಕ್ತವಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಬಿಜೆಪಿ ವರಿಷ್ಠರಿಂದ ರಹಸ್ಯ ಸಂದೇಶವೊಂದು ರವಾನೆಯಾಗಿದೆ ಎಂಬ ಸುದ್ದಿ ಕಮಲ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ.
ಚುನಾವಣೆಗೆ ಒಂದು ವರ್ಷ ಇರುವಾಗ ಬಹುತೇಕ ರಾಜ್ಯಗಳಲ್ಲಿ ಸಿಎಂ ಹಾಗೂ ಇತರ ಪ್ರಮುಖರ ಬದಲಾವಣೆ ಬಿಜೆಪಿ ಪಾಳಯದಲ್ಲೂ ಸಹಜ ಪ್ರಕ್ರಿಯೆಯಾಗಿದೆ. ಹಾಗಾಗಿ ಉತ್ತರ ಪ್ರದೇಶ ಸಹಿತ ಪಂಚ ರಾಜ್ಯಗಳ ಚುನಾವಣೆ ನಂತರ ಒತ್ತಡಗಳಿಂದ ಮುಕ್ತವಾಗಿರುವ ಬಿಜೆಪಿ ವರಿಷ್ಠರು ಇದೀಗ ಕರ್ನಾಟಕ ರಾಜಕಾರಣದತ್ತ ಚಿತ್ತ ಹರಿಸಿದ್ದಾರೆ.
ಬೊಮ್ಮಾಯಿ ಮುಂದಿದೆ ಎರಡು ಆಯ್ಕೆ:
ರಾಜ್ಯದಲ್ಲಿ ಆಪರೇಷನ್ ಕಮಲ ಮೂಲಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸಂಘಪರಿವಾರ ಹಾಗೂ ಹಿಂದೂತ್ವ ಸಂಬಂಧಿತ ಸಂಘಟನಾತ್ಕಕ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಅದರಲ್ಲೂ ಪ್ರಸ್ತುತ ಮುಖ್ಯಮಂತ್ರಿ ಹಾಗೂ ಸಂಪುಟದಲ್ಲಿರುವ ಬಹುಪಾಲು ಮಂದಿ ಸಚಿವರು ಬಿಜೆಪಿಯ ತತ್ವ ಸಿದ್ದಾಂತಗಳಿಂದ ದೂರ ಇದ್ದವರು. ಆಪರೇಷನ್ ಸಹಿತ ಬದಲಾದ ಪರಿಸ್ಥಿತಿಯಲ್ಲಿ ಹಾಗೂ ಅವಕಾಶವಾದವನ್ನು ಹುಡುಕುತ್ತಾ ಬಿಜೆಪಿಗೆ ಬಂದಿರುವ ನಾಯಕರೇ ಬಹುಪಾಲು ಮಂದಿ ಪ್ರಸಕ್ತ, ಮಹತ್ವದ ಇಲಾಖೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಸುಧಾಕರ್, ಅಶ್ವತ್ಥನಾರಾಯಣ್ ಸಹಿತ ಕೆಲವು ಮಂತ್ರಿಗಳಿಂದ ಸಂಘದ ಹಿತಚಿಂತಕರಿಗೆ ನಿರಂತರ ಅನ್ಯಾಯವಾಗುತ್ತಿದೆ ಎಂಬುದು ಆರೆಸ್ಸೆಸ್‌ನ ರಾಷ್ಟ್ರೀಯ ಪ್ರಮುಖರ ಆಕ್ರೋಶ. ಹಾಗಾಗಿ ಈ ವಿಚಾರದಲ್ಲಿ ಬಿಜೆಪಿ ವರಿಷ್ಠರೇ ಚಿಂತಿತರಾಗಿದ್ದಾರೆ ಎನ್ನಾಲಾಗಿದೆ. ರಾಜ್ಯ ಸರ್ಕಾರ ಹಾಗೂ ಬಿಜೆಪಿ ಪಾಳಯಕ್ಕೆ ಭರ್ಜರಿ ಸರ್ಜರಿ ಮಾಡಲು ಸ್ವತಃ ಅಮಿತ್ ಷಾ ಅವರೇ ಒಲವು ತೋರಿದ್ದು ಈ ಸಂಬಂಧ ನಿಷ್ಠುರ ನಡೆ ಅನುಸರಿಸಲು ಮುಂದಾಗಿದ್ದಾರೆನ್ನಲಾಗಿದೆ.
ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ ಮುಖ್ಯಮಂತ್ರಿಯಾಗಿರುವ ಬಸವರಾಜ್ ಬೊಮ್ಮಾಯಿ ಬಗ್ಗೆ ಮೂಲ ಬಿಜೆಪಿಗರಿಗೆ ಅಸಮಾಧಾನ ಇದೆ. ದೇವಾಲಯ ಧ್ವಂಸ ಪ್ರಕರಣ, ಕಾರಿಂಜೆ ಸನ್ನಿಧಿ ಬಳಿಯ ಗಣಿಗಾರಿಕೆ ವಿವಾದ ಕುರಿತ ನಿರ್ಲಕ್ಷ್ಯ, ಬಿಟ್ ಕಾಯಿನ್ ಹಗರಣ ಹಾಗೂ ಸಂಘ ಪರಿವಾರದ ಕಾರ್ಯಕರ್ತರಿಗೆ ಸಂಬಂಧಿಸಿದಂತೆ ಕೆಲವು ಸಚಿವರು ಅನುಸರಿಸುತ್ತಿರುವ ಕ್ರಮಗಳಿಂದಾಗಿ ಕಮಲ ಕಾರ್ಯಕರ್ತರೇ ಮುನಿಸಿಕೊಂಡಿದ್ದಾರೆ. ಅದರಲ್ಲೂ ಮಂತ್ರಿ ಸುಧಾಕರ್ ವಿರುದ್ಧ ಅನೇಕ ಬಿಜೆಪಿ ನಾಯಕರು ಹಾಗೂ ಸಂಘದ ವಿವಿಧ ಕ್ಷೇತ್ರಗಳ ಪ್ರಮುಖರು ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೂಲ ಬಿಜೆಪಿಗರ ಕೈಗೆ ಅಧಿಕಾರ ಕೊಡಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ, ಸುಧಾಕರ್ ಬೆನ್ನಿಗೆ ನಿಂತಿರುವ ಬಸವರಾಜ್ ಬೊಮ್ಮಾಯಿ ಅವರನ್ನೇ ಬದಲಾಯಿಸುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ ಎಂಬ ಮಾತುಗಳು ಬಿಜೆಪಿಯ ಮೊಗಸಾಲೆಯಲ್ಲಿ ಕೇಳಿಬರುತ್ತಿದೆ.
ಈ ನಡುವೆ, ಬಿಜೆಪಿ ಪಕ್ಷದ ನಿರ್ಧಾರಗಳಿಗೆ ಅಂತಿಮ ಅಂಕಿತ ಹಾಕುವ ಅಮಿತ್ ಷಾ ಕಡೆಯಿಂದ ಸಿಎಂ ಹಾಗೂ ಬಿಜೆಪಿ ನಾಯಕರಿಗೆ ರವಾನೆಯಾಗಿದೆ ಎನ್ನಲಾಗಿರುವ ಸಂದೇಶ ತೀವ್ತ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ‘ಬದಲಾಗಿ ಅಥವಾ ಬದಲಾಯಿಸಿ’ ಎಂಬ ಆರೆಸ್ಸೆಸ್ ಹಿರಿಯರ ಸಲಹೆ ಕೂಡಾ ಕೌತುಕಕ್ಕೆ ಕಾರಣವಾಗಿದೆ. ಹಾಗಾಗಿ ಇನ್ನೆರಡು ವಾರ ಕಾಲ ರಾಜ್ಯದ ಕೇಸರಿ ಪಾಳ್ಯವು ಭರ್ಜರಿ ವಿದ್ಯಮಾನಗಳಿಗೆ ಸಾಕ್ಷಿಯಾಗಲಿದೆ.
ಒಂದು ಮೂಲದ ಪ್ರಕಾರ ಮುಖ್ಯಮಂತ್ರಿಯೇ ಬದಲಾಗುತ್ತಾರೆ ಅಥವಾ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾಗಿರುವ ಸಚಿವರನ್ನು ಕೈಬಿಟ್ಟು ಸಂಪುಟ ಸರ್ಜರಿ ಮಾಡುವ ಸಾಧ್ಯತೆಗಳಿವೆ.
ಈ ಮಧ್ಯೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಒತ್ತಾಯ ಆರೆಸ್ಸೆಸ್ ಕಾರ್ಯಕರ್ತರದ್ದು. ಹಾಗೂ ಬಿಜೆಪಿಯ ಒಂದು ಗುಂಪಿನಿಂದಲೂ ಈ ರೀತಿಯ ಆಗ್ರಹದ ಮಾತುಗಳು ಕೇಳಿಬಂದಿದೆ. ಈ ಕೋರಿಕೆ ಬಗ್ಗೆ ಬಿಜೆಪಿ ವರಿಷ್ಠರಿಗೂ ಹಿತ ಅನ್ನಿಸಿದೆ. ಈಗಿರುವ ನಾಯಕತ್ವದಲ್ಲೇ ಮುಂದಿನ ವಿಧಾನಸಭಾ ಚುನಾವಣೆ ಎದುರಿಸಿದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರವನ್ನು ಕಳೆದುಕೊಳ್ಳುವುದು ನಿಶ್ಚಿತ ಎಂದು ಮನಗಂಡಿರುವ ವರಿಷ್ಠರು ಈ ಬೆಳವಣಿಗೆ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.