ಬೆಂಗಳೂರು: ಜೆಡಿಎಸ್ ಗೆ ಯಾವುದೇ ಸಿದ್ಧಾಂತ ಇಲ್ಲ, ಅದು ಗೆದ್ದವರ ಜೊತೆ ಸೇರಿಕೊಳ್ಳುವ ಪಕ್ಷ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿವಿಧ ರಾಜಕೀಯ ನಾಯಕರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಜೆಡಿಎಸ್ ಹಾಗೂ ಬಿಜೆಪಿಯ ವೈಎಸ್ ವಿ ದತ್ತಾ, ನಾಗೇಶ್, ಮೋಹನ್ ಕುಮಾರ್ ಹಾಗೂ ದಯಾನಂದ ಅವರನ್ನು ಪಕ್ಷಕ್ಕೆ ಸ್ವಾಗತ ಮಾಡಿಕೊಳ್ಳಲಾಗಿದೆ. ನಾನು ಕೂಡ ಅವರಿಗೆ ಪಕ್ಷಕ್ಕೆ ಹಾರ್ದಿಕ ಸ್ವಾಗತ ಬಯಸುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ಅತಿ ಹೆಚ್ಚು ಕಾಲ ಇರುವ ಪಕ್ಷ. ಸುಮಾರು 137 ವರ್ಷಗಳ ಸಂಸ್ಥಾಪನಾ ದಿನ ಆಚರಿಸಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ. ಬೇರೆ ಪಕ್ಷಗಳು ಸ್ವಾತಂತ್ರ್ಯ ಬಂದ ನಂತರ ಹುಟ್ಟಿಕೊಂಡ ಪಕ್ಷ. ಆರ್ ಎಸ್ ಎಸ್ ಹುಟ್ಟಿದ್ದು 1925ರಲ್ಲಿ, ಜನ ಸಂಘ ಹುಟ್ಟಿದ್ದು 1951ರಲ್ಲಿ, ಜೆಡಿಎಸ್ ಹುಟ್ಟಿದ್ದು 1999ರಲ್ಲಿ. ಜನತಾ ಪಾರ್ಟಿ 1977ರಲ್ಲಿ ರಚನೆ ಆಯಿತು. ನಾನು ದತ್ತಾ ಅವರು ಜನತಾ ಪಕ್ಷದಲ್ಲಿ ಇದ್ದೆವು. ನಂತರ ಪಕ್ಷ ಭಾಗ ಆಗಿ 1999ರಲ್ಲಿ ಜೆಡಿಯು ಹಾಗೂ ಜೆಡಿಎಸ್ ಆಗಿ ಇಬ್ಭಾಗವಾಯಿತು. ದತ್ತಾ ಜೆಡಿಎಸ್ ನಲ್ಲಿ ಶಾಸಕರಾಗಿದ್ದರು, ಬಹಳ ಪ್ರತಿಭಾವಂತ ವ್ಯಕ್ತಿ. ದೇಶ ಹಾಗೂ ರಾಜ್ಯದ ರಾಜಕಾರಣವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವವರು. ಎಲ್ಲಾ ಸಿದ್ಧಾಂತ ಅರ್ಥ ಮಾಡಿಕೊಂಡಿದ್ದಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಕಮ್ಯುನಿಷ್ಟ್ ಸಿದ್ಧಾಂತ ಅರ್ಥ ಮಾಡಿಕೊಂಡಿದ್ದಾರೆ. ಜೆಡಿಎಸ್ ಗೆ ಯಾವುದೇ ಸಿದ್ಧಾಂತ ಇಲ್ಲ. ಬಿಜೆಪಿಯದು ಕೋಮುವಾದ ಸಿದ್ಧಾಂತ. ಕಾಂಗ್ರೆಸ್ ಮಾತ್ರ ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ, ಸಮಾನತೆ ಮೇಲೆ ನಂಬಿಕೆ ಇರುವ ಪಕ್ಷ. ಜೆಡಿಎಸ್ ಗೆ ಯಾವುದೇ ಸಿದ್ಧಾಂತ ಇಲ್ಲ. ಬಿಜೆಪಿ ಗೆದ್ದರೆ ಬಿಜೆಪಿ ಜತೆಗೆ, ಕಾಂಗ್ರೆಸ್ ಗೆದ್ದರೆ ಕಾಂಗ್ರೆಸ್ ಜತೆ ಬರುತ್ತಾರೆ. ಅವರು ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರಲ್ಲ. ನಾವು ಇದ್ದಾಗಲೇ 2004ರಲ್ಲಿ 59 ಸೀಟು ಗೆದ್ದಿದ್ದರು. ಅದಾದ ಮೇಲೆ ಕಡಿಮೆ ಆಗುತ್ತಿದೆಯೇ ಹೊರತು ಹೆಚ್ಚಾಗುತ್ತಿಲ್ಲ. ಅವರು ಏನೇ ಹೇಳಿದರೂ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರಲ್ಲ ಎಂದರು.
ಈಗ ದತ್ತಾ ಅವರು ಬಹಳ ದೀರ್ಘ ಕಾಲ ಜನತಾ ಪಕ್ಷದಲ್ಲಿದ್ದು, ಈಗ ರಾಜ್ಯ ಹಾಗೂ ದೇಶದ ರಾಜಕಾರಣದ ದೃಷ್ಟಿಯಿಂದ, ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು, ಪರಿಶಿಷ್ಟರಿಗೆ ನ್ಯಾಯ ನೀಡುವ ಪಕ್ಷ ಕಾಂಗ್ರೆಸ್ ಮಾತ್ರ. ಬಿಜೆಪಿ ಇಂದು ಕೋಮುವಾದ ಮೂಲಕ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಇವತ್ತು ಅವಕಾಶ ವಂಚಿತ ಜನರಿಗೆ ಅಭದ್ರತೆ ಕಾಡುತ್ತಿದೆ. ಎಲ್ಲರೂ ಆತಂಕದಲ್ಲಿ ಜೀವನ ಮಾಡುವಂತಾಗಿದೆ. ಯಾರಾದರೂ ಬಿಜೆಪಿ ಸರ್ಕಾರ ಟೀಕೆ ಮಾಡಿದರೆ, ಅವರ ಮೇಲೆ ಮೊಕದ್ದಮೆ ಹಾಕಿ ಹೆದರಿಸುತ್ತಾರೆ. ಮಾಧ್ಯಮಗಳನ್ನು ಹೆದರಿಸುತ್ತಾರೆ. ಇವತ್ತು ಪ್ರಜಾಪ್ರಭುತ್ವ, ಸಂವಿಧಾನಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದರು.
ದತ್ತಾ ಅವರು ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಯಾವುದೇ ಷರತ್ತು ಇಲ್ಲದೇ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಅವರ ಸ್ನೇಹಿತರು ಹಿಂಬಾಲಕರು ಪಕ್ಷಕ್ಕೆ ಸೇರುತ್ತಿದ್ದಾರೆ. ಅವರ ಆಗಮನದಿಂದ ಕಡೂರು ಮಾತ್ರವಲ್ಲ ರಾಜ್ಯದಲ್ಲಿ ಪಕ್ಷಕ್ಕೆ ಶಕ್ತಿ ಹೆಚ್ಚಲಿದೆ ಎಂದು ಭಾವಿಸುತ್ತಾ ಅವರನ್ನು ಪಕ್ಷಕ್ಕೆ ಸ್ವಾಗತ ಮಾಡುತ್ತೇನೆ ಎಂದರು.
ನಾಗೇಶ್ ಅವರು ತಾಂತ್ರಿಕ ನಿರ್ದೇಶಕರಾಗಿದ್ದರು. ನಂತರ ಮುಳಬಾಗಿಲಿನಿಂದ ಗೆದ್ದು ಬಂದಿದ್ದರು. ನಂತರ ಬಿಜೆಪಿಗೆ ಹೋಗಿ ಮಂತ್ರಿ, ನಿಗಮ ಮಂಡಳಿ ಮುಖ್ಯಸ್ಥರಾಗಿದ್ದರು. ಈಗ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರುತ್ತಿದ್ದಾರೆ. ಕಾಂಗ್ರೆಸ್ ಸಿದ್ಧಾಂತ ಒಪ್ಪಿದ್ದಾರೆ. ಅವರು ಹೇಳಿದಂತೆ ಅವರ ಪೂರ್ವಿಕರು ಕಾಂಗ್ರೆಸ್ ಸಿದ್ಧಾಂತ ಒಪ್ಪಿದ್ದರು. ಕಾಂಗ್ರೆಸ್ ಪಕ್ಷ ಮಾತ್ರ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರಿಗೆ ರಕ್ಷಣೆ ನೀಡಲು ಸಾಧ್ಯ. ಇದನ್ನು ಅರ್ಥ ಮಾಡಿಕೊಂಡು ಬೇಷರತ್ತಾಗಿ ಪಕ್ಷ ಸೇರುತ್ತಿದ್ದಾರೆ ಎಂದ ಸಿದ್ದರಾಮಯ್ಯ, ಅವರು ಮಹದೇವಪುರ ಕ್ಷೇತ್ರದಲ್ಲಿ ಹುಟ್ಟಿ ಬೆಳೆದವರು. ಆ ಕ್ಷೇತ್ರ ಹಾಗೂ ಬೆಂಗಳೂರಿನಲ್ಲಿ ಇವರ ಆಗಮನದಿಂದ ಪಕ್ಷಕ್ಕೆ ಶಕ್ತಿ ಹೆಚ್ಚಲಿದೆ ಎಂದರು.
ಮೋಹನ್ ಕುಮಾರ್ ಅವರು ನಮ್ಮ ಜತೆಯಲ್ಲಿದ್ದವರು. ಅವರು ಶ್ರೀನಿವಾಸ್ ಪ್ರಸಾದ್ ಅವರಿಗೆ ಸ್ನೇಹಿತರು. ಅವರ ಎಲ್ಲಾ ಚುನಾವಣೆಯಲ್ಲಿ ಹೆಚ್ಚಾಗಿ ಇವರು ಕೆಲಸ ಮಾಡಿದ್ದಾರೆ. ಅವರಿಗೆ ಕಾಂಗ್ರೆಸ್ ಹೊಸತಲ್ಲ. ಶ್ರೀನಿವಾಸ್ ಪ್ರಸಾದ್ ಅವರ ಜತೆ ಬಿಜೆಪಿ ಹೋಗಿದ್ದರು. ಈಗ ಮತ್ತೆ ಕಾಂಗ್ರೆಸ್ ಪಕ್ಷ ಸೇರುತ್ತಿದ್ದು ಅವರನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ ಎಂದರು.
ದಯಾನಂದ ಅವರು ನಮ್ಮ ಜತೆ ಇದ್ದವರು. ಕೋಲಾರದ ಜೆಡಿಎಸ್ ಪಕ್ಷದಲ್ಲಿ ಇದ್ದರು. ಈಗ ಜೆಡಿಎಸ್ ತೊರೆದು ಬೇಷರತ್ತಾಗಿ ಕಾಂಗ್ರೆಸ್ ಸೇರುತ್ತಿದ್ದಾರೆ. ಅವರು ಸೈದ್ಧಾಂತಿಕ ಆಲೋಚನೆ ಇರುವವರು ಅವರನ್ನು ನಾನು ಸ್ವಾಗತಿಸುತ್ತೇನೆ. ಇವರ ಜತೆ ಆಗಮಿಸುತ್ತಿರುವ ಎಲ್ಲರನ್ನೂ ನಾನು ಪಕ್ಷಕ್ಕೆ ಸ್ವಾಗತಿಸುತ್ತೇನೆ. ನೀವಲ್ಲರೂ ಸೇರಿ ಕೋಮುವಾದಿ ಪಕ್ಷವನ್ನು ಸೋಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ತರುವುದು ರಾಜ್ಯದ ಹಿತದೃಷ್ಟಿಯಿಂದ ಅನಿವಾರ್ಯ ಎಂದವರು ಹೇಳಿದರು.