ಬೆಂಗಳೂರು: ರಾಯಚೂರು ಜಿಲ್ಲೆಯ ರೇಖಲಮರಡಿ ಬಳಿಕ ಗೊರೆಬಾಳ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥರಾಗಿರುವವರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ, ದೂರವಾಣಿ ಮೂಲಕ ಸಿಇಒ ಅವರೊಂದಿಗೆ ಮಾತನಾಡಿ ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ, ಶುದ್ಧ ನೀರು ಪೂರೈಕೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ರಾಯಚೂರು ಜಿಲ್ಲೆಯ ಗ್ರಾಮಗಳಲ್ಲಿ ಕಲುಷಿತ ನೀರು ಕುಡಿದು ಜನ ಅಸ್ವಸ್ಥರಾಗುತ್ತಿರುವ ವರದಿಗಳನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿಗಳು, ಘಟನೆ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಿದರು.
ಮುಖ್ಯಮಂತ್ರಿ ಕೊಟ್ಟ ಸೂಚನೆಗಳು:
- ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಬೇಕು.
- ನೀರಿನ ಸ್ಯಾಂಪಲ್ ಗಳನ್ನು ಲ್ಯಾಬ್ ಗೆ ಕಳುಹಿಸಿ ತಕ್ಷಣ ವರದಿ ತರಿಸಿಕೊಳ್ಳಬೇಕು.
- ವರದಿ ಆಧಾರದಲ್ಲಿ ಗ್ರಾಮಸ್ಥರ ಕೂಲಂಕುಷ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆಗೆ ಕ್ರಮ ವಹಿಸಬೇಕು.
- ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿ, ವಿಷಪೂರಿತ ನೀರಿನ ಮೂಲಗಳನ್ನು ಬಂದ್ ಮಾಡಬೇಕು.
- ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು.
- ಎಲ್ಲ ಕ್ರಮಗಳನ್ನೂ ಸಮರ್ಪಕವಾಗಿ ತೆಗೆದುಕೊಂಡು ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು.























































