ನವದೆಹಲಿ: ನಿವೃತ್ತ ಸೈನಿಕರು ಹಾಗೂ ಅಗ್ನಿವೀರ್ಗಳಿಗೆ ನಾಗರಿಕ ಜೀವನದಲ್ಲಿ ಉದ್ಯೋಗಾವಕಾಶ ವಿಸ್ತರಿಸುವ ಉದ್ದೇಶದಿಂದ ಭಾರತೀಯ ರೈಲ್ವೆ 5,000ಕ್ಕೂ ಹೆಚ್ಚು ಮಾಜಿ ಸೈನಿಕರನ್ನು ಗುತ್ತಿಗೆ ಆಧಾರದ ಮೇಲೆ ಪಾಯಿಂಟ್ಸ್ಮೆನ್ ಹುದ್ದೆಗಳಿಗೆ ನೇಮಿಸಿಕೊಳ್ಳಲಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಈ ಕ್ರಮವು ಭಾರತೀಯ ಸೇನೆಯೊಂದಿಗೆ ರೂಪಿಸಲಾದ ಹೊಸ ‘ಸಹಕಾರದ ಚೌಕಟ್ಟು’ಯ ಭಾಗವಾಗಿದೆ. ಮಿಲಿಟರಿ ಸೇವೆಯಿಂದ ನಾಗರಿಕ ವೃತ್ತಿಗೆ ಸುಗಮ ಪರಿವರ್ತನೆ ಸಾಧಿಸಲು ಹಾಗೂ ನಿವೃತ್ತಿಯ ನಂತರದ ಉದ್ಯೋಗಾವಕಾಶ ಒದಗಿಸಲು ಈ ಯೋಜನೆ ರೂಪಿಸಲಾಗಿದೆ.
ನಿಯಮಿತ ನೇಮಕಾತಿ ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೆ ವಿವಿಧ ವಲಯಗಳಲ್ಲಿ ಮಾಜಿ ಸೈನಿಕರನ್ನು ಒಪ್ಪಂದ ಆಧಾರದಲ್ಲಿ ಪಾಯಿಂಟ್ಸ್ಮೆನ್ ಹುದ್ದೆಗಳಿಗೆ ನೇಮಿಸಿಕೊಳ್ಳಲು ಸಚಿವಾಲಯ ತೀರ್ಮಾನಿಸಿದೆ. ಪ್ರಸ್ತುತ 5,000ಕ್ಕೂ ಹೆಚ್ಚು ಲೆವೆಲ್-1 ಹುದ್ದೆಗಳ ಪ್ರಕ್ರಿಯೆ ವಲಯ ಹಾಗೂ ವಿಭಾಗ ಮಟ್ಟದಲ್ಲಿ ನಡೆಯುತ್ತಿದೆ.
ಇಲ್ಲಿಯವರೆಗೆ ಒಂಬತ್ತು ರೈಲ್ವೆ ವಿಭಾಗಗಳು ಸಂಬಂಧಿತ ಸೇನಾ ಸಂಸ್ಥೆಗಳೊಂದಿಗೆ ತಿಳುವಳಿಕೆ ಒಪ್ಪಂದಗಳಿಗೆ (MoU) ಸಹಿ ಹಾಕಿವೆ. ನೇಮಕಾತಿ ವೇಗಗೊಳಿಸಲು ಸೇನಾ ನೇಮಕಾತಿ ಘಟಕಗಳು ರೈಲ್ವೆ ವಿಭಾಗಗಳೊಂದಿಗೆ ಸಮನ್ವಯ ಸಾಧಿಸುವಂತೆ ಸೂಚಿಸಲಾಗಿದೆ.
ಮಾಜಿ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ರೈಲ್ವೆ ನೀತಿಯ ಪ್ರಮುಖ ಅಂಗವಾಗಿದ್ದು, ಲೆವೆಲ್-2 ಹಾಗೂ ಅದಕ್ಕಿಂತ ಮೇಲಿನ ಹುದ್ದೆಗಳಲ್ಲಿ ಶೇ.10ರಷ್ಟು ಅಡ್ಡಲಾಗಿ ಮೀಸಲಾತಿ ಮತ್ತು ಲೆವೆಲ್-1 ಹುದ್ದೆಗಳಲ್ಲಿ ಶೇ.20ರಷ್ಟು ಮೀಸಲಾತಿ ಈಗಾಗಲೇ ನೀಡಲಾಗಿದೆ. ಮಾಜಿ ಅಗ್ನಿವೀರರಿಗೆ ಲೆವೆಲ್-2 ಹಾಗೂ ಮೇಲಿನ ಹುದ್ದೆಗಳಲ್ಲಿ ಶೇ.5 ಮತ್ತು ಲೆವೆಲ್-1 ಹುದ್ದೆಗಳಲ್ಲಿ ಶೇ.10 ಮೀಸಲಾತಿ ಕಲ್ಪಿಸಲಾಗಿದೆ.
2024 ಮತ್ತು 2025ರಲ್ಲಿ ಪ್ರಕಟಿಸಿದ ಖಾಲಿ ಹುದ್ದೆಗಳ ಅಧಿಸೂಚನೆಗಳಲ್ಲಿ ಒಟ್ಟು 14,788 ಹುದ್ದೆಗಳನ್ನು ಮಾಜಿ ಸೈನಿಕರಿಗೆ ಮೀಸಲಿಡಲಾಗಿತ್ತು. ಇದರಲ್ಲಿ ಲೆವೆಲ್-1 ವಿಭಾಗದಲ್ಲಿ 6,485 ಹುದ್ದೆಗಳು ಹಾಗೂ ಲೆವೆಲ್-2 ಮತ್ತು ಮೇಲಿನ ವರ್ಗಗಳಲ್ಲಿ 8,303 ಹುದ್ದೆಗಳು ಸೇರಿವೆ.
ಹಿಂದೆ ಗ್ರೂಪ್-ಡಿ ಎಂದು ಕರೆಯಲ್ಪಡುತ್ತಿದ್ದ ಲೆವೆಲ್-1 ಹುದ್ದೆಗಳಿಗೆ ನೇಮಕಾತಿ ರೈಲ್ವೆ ನೇಮಕಾತಿ ಕೇಂದ್ರಗಳ ಮೂಲಕ ನಡೆಯುತ್ತದೆ. ಲೆವೆಲ್-2 ಮತ್ತು ಮೇಲಿನ ಹುದ್ದೆಗಳನ್ನು ರೈಲ್ವೆ ನೇಮಕಾತಿ ಮಂಡಳಿಗಳ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಭರ್ತಿ ಮಾಡಲಾಗುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.





















































