ಬೆಳಗಾವಿ: ಪಂಚಮಸಾಲಿ ಮೀಸಲಾತಿಗಾಗಿ ಪಟ್ಟು ಹಿಡಿದಿರುವ ಸಮುದಾಯದ ಸಂಘಟನೆಗಳು ಡಿ.10ರ ಬೆಳಗಾವಿ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕುವ ಘೋಷಣೆ ಮೊಳಗಿಸಿವೆ. ಪಾದಯಾತ್ರೆ ಪ್ರವರ್ತಕ – ಮೀಸಲಾತಿ ಕ್ರಾಂತಿಯೋಗಿ, ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಕೂಡಲಸಂಗಮದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದ್ದು, ಪೂರ್ವಭಾವಿ ಸರಣಿ ಸಭೆಗಳು ಚಟುವಟಿಕೆಗಳ ಕೇಂದ್ರಬಿಂದುವಾಗಿವೆ.
ಡಿ.10ರ ಬೆಳಗಾವಿ ಮುತ್ತಿಗೆ ಅಂಗವಾಗಿ ಧಾರವಾಡದಲ್ಲಿ ಜಿಲ್ಲಾ ಪಂಚಮಸಾಲಿ lpap ಹಾಗೂ ಪಂಚಸೇನಾ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ‘ಪಂಚಮಸಾಲಿಗಳನ್ನು ಮುಟ್ಟಿದ್ರೆ ಮತ್ತೊಂದು ನರಗುಂದ ಬಂಡಾಯ ಕ್ರಾಂತಿ ಆಗುತ್ತೆ’ ಎಂದು ಎಚ್ಚರಿಕೆ ನೀಡಿದರು.
ಬೆಳಗಾವಿ ಚಲೋ ಹೋರಾಟ ಸಂಬಂಧ ವಕೀಲರೊಂದಿಗೆ ಹಾಗೂ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿದ ಶ್ರೀಗಳು, ಒಂದು ವೇಳೆ ಪೊಲೀಸರು ಕೇಸ್ ಹಾಕಿದ್ರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು. ಪಂಚಮಸಾಲಿ-ಮಲೆಗೌಡ-ದೀಕ್ಷಾ-ಗೌಡ-ಚತುರ್ಥಲಿಂಗಾಯತರುಗಳಿಗೆ 2A ಹಾಗೂ ಲಿಂಗಾಯತ ಉಪಸಮಾಜಗಳಿಗೆ OBC ಮೀಸಲಾತಿಗೆ ಹಕ್ಕೊತ್ತಾಯಿಸಿ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಡಿ.10 ಮಂಗಳವಾರ ಬೆಳಿಗ್ಗೆ 10 ಕ್ಕೆ ಪಂಚಮಸಾಲಿ-ಮಲೆಗೌಡ-ದೀಕ್ಷಾ – ಗೌಡಲಿಂಗಾಯತ ಸಮಾಜದವತಿಯಿಂದ ಹಾಗೂ ವಕೀಲರಿಂದ ಬೆಳಗಾವಿ ಸುವರ್ಣವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಪಂಚಮಸಾಲಿ ರೈತರಿಂದ ಟ್ಯಾಕ್ಟರ್ Rally ನಡೆಸಲಿದ್ದು, ಪಂಚಮಸಾಲಿಗಳ ನಡಿಗೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಕೀಲರ ಪರಿಷತ್ ಕಾರ್ಯಧ್ಯಕ್ಷ cs ನೇಗಿನಾಲ್ ಸಹಿತ ವಕೀಲರು ಸಮುದಾಯಕ್ಕಾಗಿ ಹೋರಾಟ ನಡೆಸುವವರನ್ನು ಪೊಲೀಸರು ಬಂಧಿಸಿದರೆ ಪಂಚಮಸಾಲಿ ವಕೀಲರು ಬಿಡಿಸಿಕೊಂಡು ಬರುತ್ತೇವೆ ಎಂದು ಪ್ರಮಾಣ ಮಾಡಿದರು.
ಈ ವೇಳೆ ಮಾತನಾಡಿದ ಪಂಚಸೇನಾ ಅಧ್ಯಕ್ಷ ರುದ್ರಗೌಡ, ಪ್ರಾಣ ಕೊಟ್ಟಾದರೂ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದು ಸಿದ್ದ ಎಂದು ರಣಕಹಳೆ ಮೊಳಗಿಸಿದರು. ಪಂಚಸೇನಾ ಮಹಿಳಾ ಘಟಕ ಕಿತ್ತೂರು ಕರ್ನಾಟಕ ಅಧ್ಯಕ್ಷರಾದ ಪೂಜಾ ಸವದತ್ತಿ ಮಾತನಾಡಿ ನಮಗೆ ನಮ್ಮ ಜಗದ್ಗುರುಗಳು ಹೈಕಮಾಂಡ್ ಅವರ ನೇತೃತ್ವದಲ್ಲಿ ಹೋರಾಟ ಯಶಸ್ವಿಗೊಳಿಸಲಾಗುತ್ತದೆ ಎಂದರು. ರೈತ ಘಟಕದ ಅಧ್ಯಕ್ಷ ಬಸವನಗೌಡ ದ್ಯಾಮನಗೌಡ ಮಾತನಾಡಿ, ಮತ್ತೊಂದು ಬಂಡಾಯಕ್ಕೆ ಸಿದ್ದರಾಗಿದ್ದೇವೆ, ಡಿ.10ರ ಬೆಳಗಾವಿ ಮುತ್ತಿಗೆ ಯಶಸ್ಸುಗೊಳಿಸುತ್ತೇವೆ ಎಂದರು.