ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಕಳೆದ 30 ದಿನಗಳ ಅವಧಿಯಲ್ಲಿ ₹2,36,73,185 ನಗದು, 70 ಗ್ರಾಂ ಚಿನ್ನ ಹಾಗೂ 1.712 ಕೆ.ಜಿ ಬೆಳ್ಳಿ ಸಂಗ್ರಹವಾಗಿದೆ.
ಮಲೆ ಮಹದೇಶ್ವರಸ್ವಾಮಿ ದೇವಾಲಯದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ ಮಠದ ಅಧ್ಯಕ್ಷ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆದು ಎಣಿಕೆ ಕಾರ್ಯ ಪ್ರಾರಂಭವಾಯಿತು. ಸಿಸಿ ಕ್ಯಾಮೆರಾ ನಿಗಾವಹನೆಯಲ್ಲಿ ಬೆಳಿಗ್ಗೆಯಿಂದ ಆರಂಭವಾದ ಎಣಿಕೆ ಕಾರ್ಯ ಸಂಜೆ 7.30 ರವರೆಗೆ ನಡೆಯಿತು.
ಸರ್ಕಾರಿ ರಜಾದಿನಗಳು, ಅಮಾವಾಸ್ಯೆ, ಜಾತ್ರಾ ಮಹೋತ್ಸವದ ಜೊತೆ ರಾಜ್ಯ ಸರ್ಕಾರದ ‘ಶಕ್ತಿ ಯೋಜನೆ’ಯ ಉಚಿತ ಬಸ್ ಪ್ರಯಾಣದ ಸೌಲಭ್ಯದಿಂದಾಗಿ ಹೆಚ್ಚಿನ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು. ಭಕ್ತರು ಹರಕೆಯ ರೂಪದಲ್ಲಿ ನಗದು ಹಾಗೂ ಆಭರಣಗಳನ್ನು ಅರ್ಪಿಸಿದ್ದರು. ಹುಂಡಿಯಲ್ಲಿ 20 ವಿದೇಶಿ ಕರೆನ್ಸಿ ನೋಟುಗಳ ಜೊತೆಗೆ ಈಗ ಉಪಯೋಗದಲ್ಲಿಲ್ಲದ ₹2000 ಮುಖಬೆಲೆಯ 14 ನೋಟುಗಳು ಸಹ ಪತ್ತೆಯಾಗಿವೆ.
ಈ ಎಣಿಕೆ ಕಾರ್ಯದಲ್ಲಿ ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ. ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಲೆಕ್ಕಾ ಅಧೀಕ್ಷಕ ಗುರುಮಲ್ಲಯ್ಯ, ಚಾಮರಾಜನಗರ ಜಿಲ್ಲಾಡಳಿತದ ಶ್ವೇತಾ, ಕೊಳ್ಳೇಗಾಲದ ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕರು, ಪೊಲೀಸ್ ಅಧಿಕಾರಿಗಳು ಮತ್ತು ಪ್ರಾಧಿಕಾರದ ಸಿಬ್ಬಂದಿ ಭಾಗವಹಿಸಿದ್ದರು.