(ವರದಿ: ಮಹಾದೇವ ಸ್ವಾಮಿ)
ಚಾಮರಾಜನಗರ: ಕಳೆದ ಕೆಲವು ದಿನಗಳಿಂದ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಡುತೊರೆಹಳ್ಳ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಹನೂರು ತಾಲ್ಲೂಕಿನ ಒಡೆಯರ ಪಾಳ್ಯ, ಪಿ.ಜಿ.ಪಾಳ್ಯ, ಕೆರೆದಿಂಬ, ಹೊನ್ನಮೇಟಿ ಅರಣ್ಯ ಪ್ರದೇಶದಲ್ಲಿ ಒಂದು ವಾರದಿಂದನಿರಂತರವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಬೆಟ್ಟಗುಡ್ಡಗಳಿಂದ ಹಳ್ಳದ ಮೂಲಕ ಅಜ್ಜೀಪುರ ಸಮೀಪದ ಉಡುತೊರೆ ಜಲಾಶಯಕ್ಕೆ ಯಥೇಚ್ಛವಾಗಿ ನೀರು ಹರಿದು ಬರುತ್ತಿದೆ.
ಮುಂದಿನ ಆಗಸ್ಟ್ ತಿಂಗಳಿನಿಂದ ಮಳೆ ಹೆಚ್ಚು ಬೀಳಲಿರುವುದರಿಂದ ಜಲಾಶಯ ಭರ್ತಿಯಾಗುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಜಲಾಶಯದಿಂದ ನೀರು ಬಿಟ್ಟರೆ ಹಲವು ಚೆಕ್ ಡ್ಯಾಂಗಳು ತುಂಬುವುದರಿಂದ ಸುತ್ತ ಮುತ್ತಲಿನ ಪ್ರದೇಶದ ಅಂತರ್ಜಲ ಮಟ್ಟವು ಹೆಚ್ಚುತ್ತದೆ , ಇದರಿಂದ ಕೃಷಿ ಚಟುವಟಿಕೆಗಳಿಗೆ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ
ಕಳೆದ ವರ್ಷ ಸಮರ್ಪಕ ಮಳೆಯಾಗದಿದ್ದರಿಂದ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿಲ್ಲ. ಈ ವರ್ಷವಾದರೂ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾದರೆ ಸಾವಿರಾರು ಎಕರೆ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಇದಲ್ಲದೆ ಹಳ್ಳದ ಮೂಲಕ ನೀರು ಹರಿಸಿದರೆ ಐದಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಬಗೆಹರಿಯಲಿದೆ ಎಂಬ ವಿಶ್ವಾಸ ಆ ಪ್ರದೇಶದ ಜನರದ್ದು.