ಧಾರವಾಡ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಬಿಜೆಪಿ ಸದಸ್ಯ ರಾಮಣ್ಣ ಬಡಿಗೇರ ಆಯ್ಕೆಯಾಗಿದ್ದಾರೆ. ಉಪ ಮೇಯರ್ ಆಗಿ ಬಿಜೆಪಿಯ ದುರ್ಗಮ್ಮ ಬಿಜವಾಡ ಚುನಾಯಿತರಾಗಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ಮೇಯರ್-ಉಪಮೇಯರ್ ಚುನಾವಣೆಯನ್ನು ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಪ್ರತಿಷ್ಠೆಯಾಗಿ ಸ್ವೀಕರಿಸಿತ್ತು. ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ರಾಮಣ್ಣ ಅವರಿಗೆ 47 ಮತಗಳು ಬಂದರೆ, ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದ ಇಮಾಮ ಯಲಿಗಾರ ಅವರಿಗೆ 36 ಮತಗಳು ಸಿಕ್ಕಿವೆ. ಮೂವರು ಗೈರಾಗಿದ್ದರೆ, ನಾಲ್ವರು ಸದಸ್ಯರು ತಟಸ್ಥರಾಗಿ ಉಳಿದಿದ್ದರು.
ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹುಸೇನಬಿ ನಾಲತವಾಡ ವಿರುದ್ಧ ಬಿಜೆಪಿಯ ದುರ್ಗಮ್ಮ ಬಿಜವಾಡ ಅವರು ಜಯಶಾಲಿಯಾಗಿ ಪಟ್ಟ ಅಲಂಕರಿಸಿದ್ದಾರೆ. ಮೇಯರ್ ಆಗಿ ಆಯ್ಕೆಯಾಗಿರುವ ರಾಮಣ್ಣ ಅವರು ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರ ಆಪ್ತರು ಎನ್ನಲಾಗಿದೆ.


























































