ಬೆಂಗಳೂರು: ವಿವಿಧ ಸಾಧನೆಗಳಿಗೆ ಮತ್ತು ಅಭಿವೃದ್ಧಿ ಯೋಜನೆಗಳಿಗಾಗಿ ಕೇಂದ್ರ ಸರಕಾರವನ್ನು ಅಭಿನಂದಿಸುವ ನಿರ್ಣಯವನ್ನು ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಎರಡನೇ ದಿನದ ರಾಜ್ಯ ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ಅಂಗೀಕರಿಸಲಾಗಿದೆ ಎಂದು ಪಕ್ಷದ ರಾಜ್ಯ ಮುಖ್ಯ ವಕ್ತಾರರಾದ ಎಂ.ಜಿ.ಮಹೇಶ್ ಅವರು ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ರಾಮ ಮಂದಿರದ ಜೊತೆ ರಾಷ್ಟ್ರ ಮಂದಿರವನ್ನು ಕಟ್ಟುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಅಪರಿಮಿತ ಕಾರ್ಯವನ್ನು ಇಂದಿನ ಸಭೆ ಶ್ಲಾಘಿಸಿದೆ. ಬಾಹ್ಯಾಕಾಶದಿಂದ ಆರಂಭಿಸಿ ಕೋವಿಡ್ ಲಸಿಕೆ ವರೆಗೆ ಸಾಧನೆ, ಎಲ್ಲ ರಂಗಗಳಲ್ಲಿ ಆತ್ಮನಿರ್ಭರತೆ ಕಡೆ ದೇಶವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಗರಿಷ್ಠ ಪ್ರಯತ್ನಕ್ಕಾಗಿ ಕಾರ್ಯಕಾರಿಣಿಯು ಅವರನ್ನು ಅಭಿನಂದಿಸಿದೆ ಎಂದರು.
ತುರ್ತು ಪರಿಸ್ಥಿತಿ ಬಳಿಕ ಪಿಸುಮಾತಿನ ಆಂದೋಲನದ ಕಾರಣ ಇಂದಿರಾ ಗಾಂಧಿ ಅವರು ಸೋತ ಬಗ್ಗೆ ಉಲ್ಲೇಖಿಸಿದ ಅವರು, ಪಕ್ಷದ ಬೆಳವಣಿಗೆಯ ಜೊತೆ ರಾಜಕೀಯ ಪ್ರಜ್ಞೆ ಬೆಳೆಸುವುದು, ಮಾನವನ ದೌರ್ಬಲ್ಯ ಎನಿಸಿದ ಪಿಸುಮಾತಿನ ಆಂದೋಲನದ ವಿರುದ್ಧ ದೇಶಪ್ರೇಮಿ ಮಾಧ್ಯಮದ ಸಹಕಾರವನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದ್ದಾಗಿ ವಿವರಿಸಿದರು. ಪಕ್ಷ ಮತ್ತು ಸರಕಾರದ ನಡುವೆ ಸಮನ್ವಯತೆ ಅನಿವಾರ್ಯ ಎಂದು ಪ್ರತಿಪಾದಿಸಿದ್ದಾಗಿ ತಿಳಿಸಿದರು. ಪಕ್ಷ ಎಲ್ಲಕ್ಕಿಂತ ದೊಡ್ಡದು. ಪಕ್ಷದ ಸೂಚನೆಯನ್ನು ಯಾರೂ ಮೀರಬಾದರು. ಪರಸ್ಪರ ಅಪನಂಬಿಕೆಯ ಪರಿಣಾಮವಾಗಿ ನಮ್ಮ ಗುರಿ ಹಿಂದೆ ಬೀಳಬಾರದು ಎಂದು ತಿಳಿಸಿದ್ದಾಗಿ ಹೇಳಿದರು.
ರಾಜ್ಯ ವಕ್ತಾರರಾದ ಡಾ. ಗಿರಿಧರ್ ಉಪಾಧ್ಯಾಯ, ಜಿಲ್ಲಾ ಸಹ ವಕ್ತಾರರಾದ ನಾಗನಗೌಡರ, ಗೋಪಿ ಕಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು..