ಹುಬ್ಬಳ್ಳಿ: ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ಮೈದಾನದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ತರಾತುರಿಯಲ್ಲಿ ಗಣೇಶೋತ್ಸವ ಆಚರಣೆಗೆ ಮುನ್ನುಡಿ ಬರೆದ ಸನ್ನಿವೇಶ ಅಚ್ಚರಿಗೆ ಕಾರಣವಾಯಿತು.
Ganeshotsava at Hubballi Kitturu Channamma Maidan @BJP4Karnataka @friendsofrss #GaneshaChaturthi #GaneshChaturthi2022 #Hubballi pic.twitter.com/tBALFbEEnd
— jayaa (@unsocial2023) August 31, 2022
ಈದ್ಗಾ ಮೈದಾನ ಎಂದೂ ಗುರುತಾಗಿರುವ ಈ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ನಂತರ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ನಿರ್ಧರಿಸಲಾಗಿತ್ತು. ಆದರೆ ಮುಸ್ಲಿಂ ಸಂಘಟನೆಗಳು ಬೆಂಗಳೂರಿನ ಚಾಮರಾಜಪೇಟೆ ಪ್ರಕರಣದಂತೆ, ಹುಬ್ಬಳ್ಳಿ ಬಗ್ಗೆಯೂ ಸುಪ್ರೀಕೋರ್ಟ್ ಮೊರೆಹೋಗಿ ತಡೆಯಾಜ್ಞೆ ತರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯೇ ತರಾತುರಿಯಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪಿಸಲಾಯಿತು ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ತಿಳಿಸಿದ್ದಾರೆ.
ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ಮೈದಾನ ಹಲವು ದಶಕಗಳಿಂದ ವಿವಾದದ ಕೇಂದ್ರ ಬಿಂದುವಾಗಿತ್ತು. ಈದ್ಗಾ ಇರುವ ಕಾರಣಕ್ಕಾಗಿ ಈದ್ಗಾ ಮೈದಾನ ಎಂದೂ ಗುರುತಾಗಿದೆ. ಈ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಸ್ಥಳೀಯ ಕೆಲವು ಗುಂಪುಗಳ ವಿರೋಧವಿತ್ತು. ಈ ವಿಚಾರದಲ್ಲಿ ದಶಕಗಳ ಹಿಂದೆ ಹಿಂಸಾಚಾರವೂ ನಡೆದಿತ್ತು. ಹಾಗಾಗಿ ಸುದೀರ್ಘ ಹೋರಾಟ ಮಾಡಿದ್ದ ಹಿಂದೂ ಸಂಘಟನೆಗಳು ಕಾನೂನು ಸಮರವನ್ನೂ ನಡೆಸಿತ್ತು. ಇದೀಗ ರಾಷ್ಟ್ರಧ್ವಜ ಹಾರಿಸಲು ಅವಕಾಶ ಸಿಕ್ಕಿದೆಯಾದರೂ ಹಿಂದೂ ಧಾರ್ಮಿಕ ಆಚರಣೆಯಾದ ಗಣೇಶೋತ್ಸವಕ್ಕೆ ಆಕ್ಷೇಪ ಎದುರಾಗಿತ್ತು. ಈ ಕುರಿತ ಪ್ರಕರಣದ ವಿಚಾರಣೆ ನಡೆಸಿರುವ ಹೈಕೋರ್ಟ್ ಹುಬ್ಬಳ್ಳಿಯ ಈ ಮೈದಾನದಲ್ಲಿ ಗಣೇಶೋತ್ಸವ ನಡೆಸಲು ಅವಕಾಶ ಕಲ್ಪಿಸಿದೆ.
ಇಂದು ಬೆಳಿಗ್ಗೆ ಹುಬ್ಬಳ್ಳಿಯ ಮೂರು ಸಾವಿರ ಮಠ ಬಳಿಯಿಂದ ಗಣೇಶ ವಿಗ್ರಹವನ್ನು ಮೆರವಣಿಗೆಯಲ್ಲಿ ತಂದ ಹಿಂದೂ ಕಾರ್ಯಕರ್ತರು ಸರಳವಾಗಿ ಪ್ರತಿಷ್ಠಾಪನಾ ಕಾರ್ಯ ನೆರವೇರಿಸಿದರು. ಗಣಪತಿ ಪರ ಘೋಷಣೆ ಕೂಗಿ ಸಂಭ್ರಮಿಸಿದರು.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಹಿಂದೂ ಸಂಘಟನೆಗಳ ಮುಖಂಡರು, ಇದೀಗ ಮೊದಲ ಬಾರಿಗೆ ಈ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ಸಿಕ್ಕಿದೆ. ಸದ್ಯಕ್ಕೆ 3 ದಿನ ಗಣೇಶೋತ್ಸವ ಆಚರಣೆಗೆ ಅವಕಾಶವಿದೆ. ಮುಂದೆ ಹನ್ನೊಂದು ದಿನಕ್ಕೆ ಅನುಮತಿಗೆ ಪ್ರಯತ್ನಿಸುತ್ತೇವೆ ಎಂದಿದ್ದಾರೆ.

























































