ಚೆನ್ನೈ: ಕರ್ನಾಟಕ ಮತ್ತು ಕೇರಳದ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಬಿನಿ ಮತ್ತು ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯಗಳು ಭರ್ತಿಯಾಗಿವೆ. ಹಾಗಾಗಿ ಅಧಿಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡಲಾಗುತ್ತಿದೆ.
ಇದರಿಂದಾಗಿ ಕಾವೇರಿ ನದಿಯ ಹರಿವು ಏರಿಕೆಯಾಗಿದ್ದು, ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹೊಗೇನಕಲ್ ಜಲಾವೃತವಾಗಿದೆ. ನದಿ ಪಾತ್ರದ ನಿವಾಸಿಗಳಿಗೆ ಪ್ರವಾಹ ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕದ ಎರಡೂ ಜಲಾಶಯಗಳು ತಮ್ಮ ಗರಿಷ್ಠ ಸಂಗ್ರಹ ಮಟ್ಟವನ್ನು ತಲುಪಿವೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ.
ಹೊಗೇನಕಲ್‌ಗೆ ಒಳಹರಿವು ಸೆಕೆಂಡಿಗೆ ಸುಮಾರು 50,000 ಘನ ಅಡಿ (ಕ್ಯೂಸೆಕ್‌ಗಳು) ದಾಖಲಾಗಿದೆ. ಮಂಗಳವಾರ ಬೆಳಿಗ್ಗೆ 9 ಗಂಟೆಯ ಹೊತ್ತಿಗೆ, ನೀರಿನ ಹರಿವು 105,000 ಕ್ಯೂಸೆಕ್‌ಗಳಿಗೆ ಏರಿಕೆಯಾಗಿದೆ. ಬೆಳಿಗ್ಗೆ 11 ಗಂಟೆಯ ಹೊತ್ತಿಗೆ 115,000 ಕ್ಯೂಸೆಕ್‌ಗಳಿಗೆ ಹೆಚ್ಚಿದೆ. ಸಂಜೆ 4 ಗಂಟೆಯ ಹೊತ್ತಿಗೆ ಸುಮಾರು 135,000 ಕ್ಯೂಸೆಕ್‌ಗಳಿಗೆ ತಲುಪಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ, ಕಾವೇರಿ ನದಿಯಲ್ಲಿನ ಪ್ರವಾಹದಿಂದಾಗಿ ಹೊಗೇನಕಲ್ ಮನೋಹರ ದೃಶ್ಯಕ್ಕೆ ಸಾಕ್ಷಿಯಾಗುತ್ತಿದೆ. ಆದರೂ ಕೂಡಾ ಜನರು ಹೊಗೆನಕಲ್ ತೆರಳದಂತೆ ಸ್ಥಳೀಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಧರ್ಮಪುರಿ ಜಿಲ್ಲಾಡಳಿತವು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ಸುರಕ್ಷತೆ ಹಿನ್ನೆಲೆಯಲ್ಲಿ ಹೊಗೇನಕಲ್ ಪ್ರವಾಸಿ ವಲಯದಲ್ಲಿ ಸ್ನಾನ ಮತ್ತು ದೋಣಿ ಸವಾರಿಗಳನ್ನು ನಿಷೇಧಿಸಿದೆ.
































































