ಬೆಂಗಳೂರು: ಕಾಂಗ್ರೆಸ್ ಪಕ್ಷದ ಪಾಪದ ಕೊಡ ತುಂಬಿದೆ. ಇನ್ನು 10 ವರ್ಷ ಬಿಡಿ, 10 ತಿಂಗಳು ಕೂಡ ಅವರು ಆಡಳಿತ ನಡೆಸಲು ಸಾಧ್ಯವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಕೆಂಗೇರಿಯಲ್ಲಿ ಶನಿವಾರ ಬಿಜೆಪಿ- ಜೆಡಿಎಸ್ ‘ಮೈಸೂರು ಚಲೋ’ ಪಾದಯಾತ್ರೆಯ ಉದ್ಘಾಟನಾ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷದ ಸರಕಾರವು ಆಡಳಿತದಲ್ಲಿ ಹಿಂದೆಂದೂ ಕಾಣದ ಭ್ರಷ್ಟಾಚಾರದಲ್ಲಿ ತೊಡಗಿದೆ. ಈ ಸರಕಾರ, ಸಿದ್ದರಾಮಯ್ಯನವರನ್ನು ಕಿತ್ತೊಗೆಯಲು ಈ ಪಾದಯಾತ್ರೆ ಮಾಡುತ್ತಿದ್ದೇವೆ ಎಂದರು. ವಾಲ್ಮೀಕಿ ನಿಗಮ, ಮುಡಾ ಹಗರಣ ಸಿದ್ದರಾಮಯ್ಯನವರ ಗಮನಕ್ಕೆ ಬಾರದೆ ನಡೆದಿದೆಯೇ ಎಂದು ಪ್ರಶ್ನಿಸಿದ ಹೆಚ್ಡಿಕೆ, ಮುಖ್ಯಮಂತ್ರಿಗಳು ಕೆಂಪಣ್ಣ ಆಯೋಗದ ಮುಚ್ಚಿಟ್ಟ ಪುಸ್ತಕವನ್ನು ತೆರೆದಿಡಲು ಒತ್ತಾಯಿಸಿದರು.
ಇದೇ ವೇಳೆ, ಯಾದಗಿರಿಯಲ್ಲಿ ಪೊಲೀಸ್ ಅಧಿಕಾರಿ ಸಾವಿನ ಬಗ್ಗೆ, ಅಧಿಕಾರಿಯ ಪತ್ನಿಯ ಆರೋಪಕ್ಕೆ ಡಾ.ಪರಮೇಶ್ವರ್ ಉತ್ತರಿಸಬೇಕಿದೆ ಎಂದು ಕುಮಾರಸ್ವಾಮಿ ಆಗ್ರಹಿಸಿದರು.