ಚಾಮರಾಜನಗರ: ಹನೂರು ಪಟ್ಟಣದ ಕ್ರಿಸ್ತ ರಾಜ ವಿದ್ಯಾ ಸಂಸ್ಥೆ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಗ್ರೀನ್ ಕ್ಯಾಂಪಸ್ ಕ್ಲೀನ್ ಕಾರ್ಯಕ್ರಮ ಗಮನಸೆಳೆಯಿತು. ಕಾಲೇಜು ವಿದ್ಯಾರ್ಥಿಗಳು ಪರಿಸರದ ಬಗ್ಗೆ ಅರಿವು ಮೂಡಿಸುವ ಪಥಸಂಚಲನ ನಡೆಸಿದರು. ವಿವಿಧ ಕಲಾ ತಂಡಗಳು ಭಾಗಿಯಾಗಿ ಪರಿಸರದ ಬಗ್ಗೆ ಅರಿವು ಮೂಡಿಸುವ ನಾಟಕ, ನೃತ್ಯ ಪ್ರದರ್ಶನ ನಡೆಸಿಕೊಟ್ಟವು.
ಕಾರ್ಯಕ್ರಮದಲ್ಲಿ ಭಾಗಿಯಾದ ಮಲೆ ಮಹದೇಶ್ವರ ವನ್ಯಜೀವಿಧಾಮದ ಎಸಿಎಫ್ ಉಮಾಪತಿ, ವಿದ್ಯಾರ್ಥಿ ಜೀವನದಿಂದಲೇ ವನ್ಯ ಪ್ರಾಣಿ, ವನ್ಯ ಸಂಪತ್ತು, ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವತ್ತರಾಗಬೇಕು ಎಂದು ಮಾರ್ಗದರ್ಶನ ಮಾಡಿದರು. ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಪ್ರತಿಯೊಬ್ಬರು ಸುತ್ತಮುತ್ತಲಿನ ಗಿಡಮರಗಳನ್ನು ಪೋಷಣೆ ಮಾಡಬೇಕು .ಅರಣ್ಯ ಸಮೃದ್ಧಿಯಾಗಿದ್ದರೆ ಉತ್ತಮ ಆಮ್ಲಜನಕ ಕಾಲಕಾಲಕ್ಕೆ ತಕ್ಕ ಮಳೆಯಾಗುತ್ತದೆ. ಇಲ್ಲದಿದ್ದರೆ ಮಾನವ ಜೀವಿಸುವುದಕ್ಕೂ ತೊಂದರೆಯಾಗುತ್ತದೆ ಎಂದರು.
ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಲೆಬಾಳುವ ಮರಗಳನ್ನು ಸಾಗಾಟ ಮಾಡುವುದು, ವನ್ಯ ಪ್ರಾಣಿಗಳನ್ನು ಬೇಟೆಯಾಡುವುದು ಕಂಡು ಬಂದರೆ ಸಂಬಂಧಪಟ್ಟ ಕಚೇರಿಗೆ ಮಾಹಿತಿ ನೀಡಿ ಇಲಾಖೆಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.
ಕ್ರಿಸ್ತರಾಜ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ಫಾದರ್ ವರ್ಷನ್ ಮಾತನಾಡಿ, ಇದೊಂದು ವೈಚಾರಿಕ ಹಾಗೂ ವೈಜ್ಞಾನಿಕ ಕಾರ್ಯಕ್ರಮ ವಿದ್ಯಾರ್ಥಿಗಳು ಶಾಲಾ ಹಂತದಿಂದಲೇ ಪರಿಸರದ ಬಗ್ಗೆ ಕಾಳಜಿ ವಹಿಸಿಕೊಂಡು ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅಗ್ನಿಶಾಮಕ ಠಾಣೆಯ ಪ್ರಭಾರ ಅಧಿಕಾರಿ ಮಹೇಶ್, ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಶಾಂತಿ, ಮುಖ್ಯೋಪಾಧ್ಯಾಯರಾದ ಸುಬ್ರಮಣ್ಯ, ಸಹ ಶಿಕ್ಷಕರಾದ ವಿನೋದ್, ಸಿಸ್ಟರ್ ಜೆಸಿಂತಾ ಗೆಲ್ಬವೋ, ಪುಷ್ಪ ಸಗಾಯ ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.