ಬೆಂಗಳೂರು: ಹಾನಗಲ್ ಹಾಗೂ ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಅಖಾಡವೆನಿಸಿದೆ. ಈ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಬಿಜೆಪಿ ಜೆಡಿಎಸ್ ಪಕ್ಷಗಳು ಹರಸಾಸಾಹಸ ನಡೆಸುತ್ತಿದೆ. ಈ ನಡುವೆ, ದಸರಾ ನಂತರ ಪ್ರಚಾರದ ಅಖಾಡಕ್ಕೆ ಧುಮುಕಲು ಜೆಡಿಎಸ್ ರಣತಂತ್ರ ರೂಪಿಸಿದೆ.
ಹಬ್ಬ ಮುಗಿದ ಮೇಲೆ, ಅಂದರೆ; ಅಕ್ಟೋಬರ್ 16ರಿಂದ ನಾನು ಉಪ ಚುನಾವಣೆ ಪ್ರಚಾರಕ್ಕೆ ಹೋಗುತ್ತೇನೆ ಎಂದು ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ರಾಮನಗರದಲ್ಲಿಈ ಕುರಿತು ಮಾಹಿತಿ ಹಂಚಿಕೊಂಡ ಅವರು, ಸಿಂಧಗಿ ಕ್ಷೇತ್ರದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಹಾನಗಲ್ ಕ್ಷೇತ್ರದಲ್ಲೂ ಜೆಡಿಎಸ್ ಪರ ಅಲೆ ಇದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್‌ನೀಡಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅವರಿಗೆ ಈಗಲೇ ಸೋಲಿನ ಭಯ ಕಾಡುತ್ತಿದೆ. ನಮಗೆ ಅನುಕೂಲವಾದ ಅಭ್ಯರ್ಥಿಯನ್ನು ನಾವು ಹಾಕಿದ್ದೇವೆ ಎಂದು ಹೆಚ್‌ಡಿಕೆ ಹೇಳಿದರು.
ಸಿಂಧಗಿ ಕ್ಷೇತ್ರದಲ್ಲಿ ಮೊನ್ನೆ ನಮ್ಮ ಅಭ್ಯರ್ಥಿ ನಾಜಿಯಾ ಶಕೀಲಾ ಅಂಗಡಿ ಅವರು ಚುನಾವಣಾ ಪ್ರಚಾರಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಜನರೇ 50 ಸಾವಿರ ರೂಪಾಯಿ ಸಂಗ್ರಹ ಮಾಡಿ ಚುನಾವಣೆಯ ಖರ್ಚಿಗೆ ನೀಡಿದ್ದಾರೆ. ಇದು ಜನರು ನಮ್ಮ ಪಕ್ಷದ ಮೇಲೆ ಇಟ್ಟಿರುವ ಪ್ರೀತಿ. ನಾನು ಮುಖ್ಯಮಂತ್ರಿ ಆಗಿದ್ದಾಗ ಗುತ್ತಿ ಬಸವಣ್ಣ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದೆ. ಆ ಭಾಗದ ರೈತರು ಈ ಯೋಜನೆಗಾಗಿ ಅನೇಕ ವರ್ಷ ಹೋರಾಟ ಮಾಡಿದ್ದರು. ಜನಸೇವೆ ಮಾಡಿದರೆ ಅವರು ನಮ್ಮನ್ನು ಕೈಬಿಡುವುದಿಲ್ಲ ಎಂಬುದಕ್ಕೆ ಇದುವೇ ಸಾಕ್ಷಿ ಎಂದು ಅವರು ಭಾವುಕಾರಾದರು.
ಸಿಂಧಗಿ ಕ್ಷೇತ್ರದಲ್ಲಿ ಕಾಂಗ್ರೆಸ್ 3ನೇ ಸ್ಥಾನದಲ್ಲಿದ್ದು, ಗೆಲುವು ಆ ಪಕ್ಷಕ್ಕೆ ಗಗನ ಕುಸುಮ. ಕಳೆದ 15 ವರ್ಷಗಳಿಂದ ಅಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳಿಗೆ ಫೈಟ್ ಇದೆ. ಇದು ಗೊತ್ತಿದ್ದೇ ಕಾಂಗ್ರೆಸ್‌ನಮ್ಮ ಪಕ್ಷದಿಂದ ಹೈಜಾಕ್ ಮಾಡಿಕೊಂಡು ಹೋದ ಮನಗೂಳಿ ಅವರ ಪುತ್ರನನ್ನು ಅಭ್ಯರ್ಥಿ ಮಾಡಿದೆ. ಇದಕ್ಕಿಂತ ದೊಡ್ಡ ದಾರಿದ್ರ್ಯ ಆ ಪಕ್ಷಕ್ಕೆ ಏನಿದೆ ಎಂದರು ಅವರು.
ಸಿಂಧಗಿಯಲ್ಲಿ ಜೆಡಿಎಸ್ ಪಕ್ಷವು ಸುಸಂಸ್ಕೃತ ಹೆಣ್ಣು ಮಗಳಿಗೆ ಟಿಕೆಟ್ ನೀಡಿದೆ. ಪಕ್ಷಕ್ಕಾಗಿ ತ್ಯಾಗ ಮಾಡಿರುವ ಕುಟುಂಬದ ಹೆಣ್ಣುಮಗಳು ಅವರು. ಜತೆಗೆ, ಎಂ.ಎ ಪಧವೀಧರೆ ಕೂಡ. ಹಾನಗಲ್ ಕ್ಷೇತ್ರದಲ್ಲಿ ಎಂ.ಟೆಕ್ ಮಾಡಿರುವ ನಿಯಾಜ್‌ಶೇಖ್ ಎಂಬ ಯುವಕನಿಗೆ ಟಿಕೆಟ್ ಕೊಟ್ಟಿದ್ದೇವೆ. ಅಂತಹಾ ಅಭ್ಯರ್ಥಿಗಳನ್ನು ಜನರು ಗೆಲ್ಲಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.