ವಾಲ್ಮಿಕಿ ನಿಗಮದ ಬೆನ್ನಲ್ಲೇ ಮತ್ತೊಂದು ಭಾರೀ ಹಗರಣ ಸ್ಫೋಟಕ ಸುದ್ದಿಯಾಗಿ ಬಿಂಬಿತವಾಗಿದೆ. ಈ ಹಗರಣದಲ್ಲಿ ಸಚಿವ ಜಮೀರ್ ಅಹ್ಮದ್ ಹೆಸರು ಥಳುಕು ಹಾಕಿಕೊಂಡಿದೆ.
ವಾಲ್ಮೀಕಿ ನಿಗಮದಂತೆ ಕರ್ನಾಟಕದಲ್ಲಿ ಇನ್ನೊಂದು ಕೇಂದ್ರ ಹಗರಣದ ಆಗರವಾಗಿದೆ. ಈ ಬಗ್ಗೆ ಮಹತ್ವದ ಸಂಗತಿಗಳನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಯಲಿಗೆಳೆದಿದ್ದಾರೆ. ಕರ್ನಾಟಕ ಹ್ಯಾಬಿಟೇಟ್ ಸೆಂಟರ್ ಮೂಲಕ ಈ ಕರ್ಮಕಾಂಡ ನಡೆದಿದೆ ಎಂದು ಯತ್ನಾಳ್ ಆರೋಪಿಸಿದ್ದಾರೆ.
ಕರ್ನಾಟಕ ರಾಜ್ಯ ಹ್ಯಾಬಿಟೇಟ್ ಕೇಂದ್ರ, ಬೆಂಗಳೂರು ಎಂಬ ಒಂದು ಸಂಘಕ್ಕೆ ಸುಮಾರು 600 ಕೋಟಿ ಅನುದಾನವನ್ನು ಕರ್ನಾಟಕ ರಾಜ್ಯ ಪಾರದರ್ಶಕ ಕಾಯ್ದೆ ಉಲ್ಲಂಘಿಸಿ ನೀಡಲಾಗಿದೆ ಎಂದು ಆರೋಪಿಸಿರುವ ಯತ್ನಾಳ್, ಈ ಹ್ಯಾಬಿಟೇಟ್ ಕೇಂದ್ರಕ್ಕೆ ಯಾವ ಸಾಂವಿಧಾನಿಕ ಮಾನ್ಯತೆಯೂ ಇಲ್ಲದಿದ್ದರೂ ಮಂತ್ರಿ ಜಮೀರ್ ಅಹ್ಮದ್ ನೇತೃತ್ವದಲ್ಲಿ ಈ ಸಂಸ್ಥೆಗೆ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡಲಾಗಿದೆ ಎಂದು ದೂರಿದ್ದಾರೆ.
ಈ ಹ್ಯಾಬಿಟೇಟ್ ಕೇಂದ್ರ ಸರ್ಕಾರಿ ಸಂಸ್ಥೆಯಲ್ಲ, ಇದರಲ್ಲಿ ಕಾರ್ಯನಿರ್ವಹಿಸುತ್ತಿರುವವರು ಸರ್ಕಾರೀ ನೌಕರರೂ ಅಲ್ಲ, ಇಲ್ಲಿ ಎಲ್ಲ ಮಾಯಾ ಎಂದು ಅವರು ಸಾಮಾಜಿಕ ಜಾಲತಾಣ ‘X’ನಲ್ಲಿ ಹಾಕಿರುವ ಪೋಸ್ಟ್ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.
ವಾಲ್ಮೀಕಿ ನಿಗಮದಂತೆ ಕರ್ನಾಟಕದಲ್ಲಿ ಇನ್ನೊಂದು ಕೇಂದ್ರ ಹಗರಣದ ಆಗರವಾಗಿದೆ.
1. ಕರ್ನಾಟಕ ರಾಜ್ಯ ಹ್ಯಾಬಿಟೇಟ್ ಕೇಂದ್ರ, ಬೆಂಗಳೂರು ಎಂಬ ಒಂದು ಸಂಘಕ್ಕೆ ಸುಮಾರು 600 ಕೋಟಿ ಅನುದಾನವನ್ನು ಕರ್ನಾಟಕ ರಾಜ್ಯ ಪಾರದರ್ಶಕ ಕಾಯ್ದೆ ಉಲ್ಲಂಘಿಸಿ ನೀಡಲಾಗಿದೆ.
2. ಈ ಹ್ಯಾಬಿಟೇಟ್ ಕೇಂದ್ರಕ್ಕೆ ಯಾವ ಸಾಂವಿಧಾನಿಕ ಮಾನ್ಯತೆಯೂ ಇಲ್ಲದಿದ್ದರೂ ಮಂತ್ರಿ…— Basanagouda R Patil (Yatnal) (@BasanagoudaBJP) July 24, 2024
ಈ ಸಂಸ್ಥೆ ವಿಶೇಷವಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾಮಗಾರಿಗಳನ್ನು ಕೈಗೊಂಡಿರುವುದು ಮಂತ್ರಿ ಹಾಗು ಅಧಿಕಾರಿಗಳು ಕೈಜೋಡಿಸಿರುವಂತೆ ಕಾಣಿಸುತ್ತದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದಲೂ ಈ ಹ್ಯಾಬಿಟೆಟ್ ಕೇಂದ್ರಕ್ಕೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಯತ್ನಾಳ್ ಆರೋಪ ಮಾಡಿದ್ದಾರೆ.
ವಾಲ್ಮೀಕಿ ನಿಗಮದ ಅಕ್ರಮ ಬಯಲಾದ ದಿನದಿಂದ ಸಚಿವ ಜಮೀರ್ ಈ ಹ್ಯಾಬಿಟೇಟ್ ಕೇಂದ್ರದ ಸಭೆಗಳನ್ನು ಪ್ರತಿನಿತ್ಯವೂ ಮಾಡಿ ಏನನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ? ಯಾವ ಕಡತಕ್ಕೆ ಬೆಂಕಿ ಬೀಳಲಿದೆ? ಈ ಹಣ ಯಾವ ಚುನಾವಣೆಗೆ ಬಳಸಲಾಗಿದೆ? ಎಂದವರು ಪ್ರಶ್ನಿಸಿದ್ದಾರೆ.



















































