ಬೆಂಗಳೂರು : ಬೆಂಗಳೂರು ನಗರ ಭೇಟಿಗಾಗಿ ಗಯಾನ ದೇಶದ ರಾಷ್ಟ್ರಪತಿ ಡಾ. ಮೊಹಮ್ಮದ್ ಇರ್ಫನ್ ಅಲಿ ಅವರು ಶುಕ್ರವಾರ ಸಂಜೆ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಗಯಾನದ ದೇಶದ ರಾಷ್ಟ್ರಪತಿಗಳನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ. ಸುಧಾಕರ್ ಅವರು ರಾಜ್ಯ ಸರಕಾರದ ಪರವಾಗಿ ಪುಷ್ಪಗುಚ್ಚ ನೀಡಿ ಆತ್ಮೀಯವಾಗಿ ಸ್ವಾಗತಿಸಿ, ರಾಜ್ಯದ ಜನಪದ ಕಲೆಯಾದ ಯಕ್ಷಗಾನವನ್ನು ಪರಿಚಯಿಸಿದರು.
ಈ ಸಮಯದಲ್ಲಿ ಅಪರ ಮುಖ್ಯ ಕಾರ್ಯದರ್ಶಿಗಳಾದ ರಜನೀಶ್ ಗೋಯಲ್, ಬೆಂಗಳೂರು ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿಗಳಾದ ಪಿ. ಹೇಮಲತಾ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಇಂದೋರಿನಲ್ಲಿ ನಡೆದ ೧೭ನೇ ಪ್ರವಾಸಿ ಭಾರತೀಯ ದಿವಸದ ಮುಖ್ಯ ಅತಿಥಿಯಾಗಿ ಗಯಾನಾದ ಅಧ್ಯಕ್ಷರಾದ ಮೊಹಮ್ಮದ್ ಇರ್ಫಾನ್ ಅಲಿ ಭಾಗವಹಿಸಿದ್ದರು. ಏಳು ದಿನಗಳ ಭಾರತದ ಭೇಟಿ ವೇಳೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಾದ – ಆಗ್ರಾ, ಹೊಸದಿಲ್ಲಿ, ಕಾನ್ಪುರ್ ಮತ್ತು ಮುಂಬೈ ನಗರಗಳಿಗೆ ಅವರು ಭೇಟಿ ನೀಡುತ್ತಿದ್ದಾರೆ.
ಭಾರತದ ಜೊತೆ ಗಯಾನದ ಆರ್ಥಿಕ ಸಂಬಂಧವನ್ನು ಸದೃಢಗೊಳಿಸಲು ಹಲವು ದ್ವಿಪಕ್ಷೀಯ ಮಹತ್ವದ ಸಭೆಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.
ಗಯಾನ ರಾಷ್ಟ್ರಾಧ್ಯಕ್ಷರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಶಕ್ತಿ, ಮೂಲಸೌಕರ್ಯ ಅಭಿವೃದ್ಧಿ, ಆರೋಗ್ಯ, ಔಷಧೀಯ, ತಂತ್ರಜ್ಞಾನ, ನಾವೀನ್ಯತೆ ಮತ್ತು ರಕ್ಷಣಾ ಸಂಬಂಧಗಳ ಕ್ಷೇತ್ರದಲ್ಲಿ ಸಹಕಾರ ಬೆಳೆಸುವ ಕುರಿತು ಸಭೆ ನಡೆಸಿದರು. ಭೇಟಿ ಸಂದರ್ಭದಲ್ಲಿ ಗಯಾನ ರಾಷ್ಟ್ರಾಧ್ಯಕ್ಷರು ರಾಷ್ಟ್ರಪತಿ ದ್ರೌಪದಿ ಮುರ್ಮು, ವಿದೇಶಾಂಗ ವ್ಯವಹಾರಗಳ ಸಚಿವರಾದ ಜೈಶಂಕರ್,ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾದ ಹರದೀಪ್ ಸಿಂಗ್ ಪುರಿ, ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ನರೇಂದ್ರ ಸಿಂಗ್ ತೋಮರ್ ಹೀಗೆ ದೇಶದ ಹಲವರು ಪ್ರಮುಖ ಸಚಿವರನ್ನೂ ಭೇಟಿ ಮಾಡುತ್ತಿದ್ದಾರೆ.


























































