ಅಹಮದಬಾದ್: ಗುಜರಾತ್ ಫೈಟ್ ಇಡೀ ದೇಶದ ಗಮನಸೆಳೆದಿದ್ದು, ಮೋದಿ ವರ್ಚಸ್ಸು ಉಳಿಸಿಕೊಳ್ಳಲು ಬಿಜೆಪಿ ಶತಪ್ರಯತ್ನದಲ್ಲಿದೆ. ಈ ಬಾರಿಯ ಗುಜರಾತ್ ವಿಧಾನಸಭಾ ಚುನಾವಣೆಯು ಬಿಜೆಪಿ ಪಾಲಿಗೆ ಕಬ್ವಿಣದ ಕಡಲೆಯಾಗಿದೆ ಎಂಬ ಚುನಾವಣಾ ಪೂರ್ವದ ವಿಶ್ಲೇಷಣೆ ಇದೀಗ ಬದಲಾದಂತಿದೆ.
ಕಾಂಗ್ರೆಸ್-ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಅಖಾಡವಾಗಿದ್ದ ಗುಜರಾತ್ ಇದೀಗ ಆಪ್-ಬಿಜೆಪಿ ನಡುವಿನ ಕಾಳಗಕ್ಕೆ ಸಾಕ್ಷಿ ಎಂಬಂತಿದೆ. ಈ ಪರಿಸ್ಥಿತಿಯು ಬಿಜೆಪಿಗೆ ಬಹಳಷ್ಟು ಹೊಡೆತದಂತಿರುತ್ತದೆ ಎಂಬ ರಾಜಕೀಯ ಪಂಡಿತರ ಅಭಿಪ್ರಾಯವೂ ಹೌದು. ಹಾಗಾಗಿಯೇ ಇದು ಹೊಸ ಲೆಕ್ಕಾಚಾರಕ್ಕೆ ಎಡೆಮಾಡಿಕೊಟ್ಟಿರುವುದು. ಈ ನಡುವೆ ‘ಬಿಜೆಪಿ ಶೂನ್ಯ’ ಎಂದು ಗುರುತಾಗಿರುವ ಗುಜರಾತ್‌ನ ಕೆಲವು ಜಿಲ್ಲೆಗಳೂ ಲೆಕ್ಕಾಚಾರವನ್ನು ರೋಚಕ ಘಟ್ಟಕ್ಜೆ ಕೊಂಡೊಯ್ದಿದೆ.
ಪ್ರಧಾನಿ ಮೋದಿಯವರ ತವರು ರಾಜ್ಯ ಇದಾಗಿರುವುದರಿಂದಾಗಿ ಬಿಜೆಪಿಯು ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದೆ. ‘ಬಿಜೆಪಿ ಶೂನ್ಯ ಜಿಲ್ಲೆ’ಗಳೆಂದು ಗುರುತಾಗಿರುವ ಕಡೆ ಮೇನಿಯಾ ಸೃಷ್ಟಿಸಲು ಹಲವು ನಾಯಕರನ್ನು ನಿಯೋಜಿಸಿರುವ ಕೇಸರಿ ಸೈನ್ಯವು ದೇಶದಲ್ಲೇ ಕ್ಷೀರ ಕ್ರಾಂತಿಗೆ ಮುನ್ನುಡಿ ಬರೆದ ಖ್ಯಾತಿಗೊಳಗಾಗಿರುವ, ‘ಅಮುಲ್’ ತವರಾಗಿರುವ ಆನಂದ್ ಜಿಲ್ಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹೆಗಲಿಗೆ ನೊಗವನ್ನಿಟ್ಟಿದೆ. ಈ ಜಿಲ್ಲೆಯಲ್ಲಿ ಸಿ.ಟಿ.ರವಿ ಪ್ರದರ್ಶಿಸುತ್ತಿರುವ ಕಮಾಲ್ ಗುಜರಾತ್ ಅಖಾಡದಲ್ಲಿ ವಿದ್ಯಮಾನಗಳ ಕೇಂದ್ರಬಿಂದುವಿನಂತಿದೆ.
ರಾಜಕೀಯ ‘ಸಂಘಟನಾ ಚತುರ’ ಎಂದೇ ಗುರುತಾಗಿರುವ ಸಿ.ಟಿ.ರವಿ ಗುಜರಾತ್‌ನ ಆನಂದ್ ಜಿಲ್ಲೆಯ ಪ್ರಚಾರಕ್ಕೆ ಹೆಚ್ಚು ಆದ್ಯತೆ ನೀಡಿದ್ದು, ವಿವಿಧ ಸಮುದಾಯಗಳನ್ನು ಬಿಜೆಪಿಯತ್ತ ಗಮನ ಕೇಂದ್ರೀಕರಿಸುವ ಪ್ರಯತ್ನ ನಡೆಸಿದ್ದಾರೆ. ಈ ಸಂಬಂಧ ಅವರು ಅನುಸರಿಸುತ್ತಿರುವ ತಂತ್ರಗಾರಿಕೆಯ ಸಭೆಗಳು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಮಂಡಲ, ಪ್ರಕೋಷ್ಟ, ಶಕ್ತಿಕೇಂದ್ರಗಳಲ್ಲಿ ಅವರ ತಂತ್ರಗಾರಿಕೆಯ ಕಸರತ್ತಿನಲ್ಲಿ ಯುವಜನರು ಭಾಗಿಯಾಗುತ್ತಿರುವುದು ಆ ಭಾಗದ್ದೇ ಆದ ಬೆಳವಣಿಗೆಯಾಗಿದೆ.
ಆನಂದ್ ಜಿಲ್ಲೆಯ ಉಸ್ತುವಾರಿಯನ್ನು ಬಿಜೆಪಿ ವರಿಷ್ಠರು ಸಿ.ಟಿ.ರವಿ ಅವರಿಗೆ ವಹಿಸಿದ್ದಾರೆ. ಕಳೆದೊಂದು ತಿಂಗಳಿನಿಂದ ಅಲ್ಲಿ ನಿರಂತರ ರಣವ್ಯೂಹ ರಚಿಸುತ್ತಿರುವ ಸಿ.ಟಿ.ರವಿ ಅವರು ಈಗಾಗಲೇ ಸಾಂಪ್ರದಾಯಿಕ ವಿರೋಧಿ ಕಾಂಗ್ರೆಸ್ ಪಕ್ಷದ ಅನೇಕ ನಾಯಕರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿಯ ಬಹಳಷ್ಟು ಮಂದಿ ಅತೃಪ್ತ ನಾಯಕರನ್ನೂ ತಮ್ಮದೇ ಶೈಲಿಯಲ್ಲಿ ಸಂಧಾನ ಮೂಲಕ ಸಮಾಧಾನಪಡಿಸಿರುವ ಇವರು, ತಮ್ಮ ಉಸ್ತುವಾರಿ ಜಿಲ್ಲೆಯಲ್ಲಿ ಬಿಜೆಪಿ ಪಾರುಪತ್ಯ ಸಾಧಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ಆನಂದ್ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿವೆ. ಈ ವರೆಗೂ ಬಿಜೆಪಿಯ ಪ್ರಾಬಲ್ಯವೇ ಇಲ್ಲದ ಈ ಜಿಲ್ಲೆಯಲ್ಲಿ ಈ ಬಾರಿ 4-5 ಸ್ಥಾನಗಳು ಕಮಲ ವೀರರಿಗೆ ಒಲಿಯಲಿದೆ. ಈ ನಿಟ್ಟಿನಲ್ಲಿ ತಮ್ಮ ಕಾರ್ಯಕರ್ತರು ನಿರಂತರ ಕೆಲಸ ಮಾಡುತ್ತಿದ್ದಾರೆ ಎಂದು ಸಿ.ಟಿ.ರವಿ ತಿಳಿಸಿದ್ದಾರೆ.
“ಶಕ್ತಿ ಕೇಂದ್ರಗಳೇ ನಮ್ಮ ಪಕ್ಷಕ್ಕೆ ಶಕ್ತಿ. ಅಲ್ಲಿನ ಕಾರ್ಯಕರ್ತರೇ ಸಮರ ಸೇನಾನಿಗಳು. ಅವರ ಶ್ರಮವೇ ನಮ್ಮ ಪಕ್ಷಕ್ಕೆ ಆಸರೆಯಂತಿರುವಾಗ ನಾವು ನಮ್ಮ ಗುರಿಯನ್ನು ಸಾಧಿಸುತ್ತೇವೆ ಎನ್ನುವುದರಲ್ಲಿ ಎರಡು ಮಾತಿಲ್ಲ” ಎಂಬ ವಿಶ್ವಾಸ ರವಿ ಅವರದ್ದು


























































