ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಪ್ರಭಾವಿ ನಾಯಕರು ರಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನೂ ದೂರ ಇಟ್ಟಿದ್ದಾರೆ. ಬಿಜೆಪಿಯ ಫೈರ್ ಬ್ರಾಂಡ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ನಡೆ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಎಬ್ಬಿಸಿದೆ. ಅಷ್ಟೇ ಅಲ್ಲ, ಕಮಲ ಪಾಳಯದಲ್ಲೂ ತಳಮಳ ಸೃಷ್ಟಿಸಿದೆ.
ವಕ್ಫ್ ವಿವಾದ ಕುರಿತಂತೆ ರಣಕಹಳೆ ಮೊಳಗಿಸರುವ ಯತ್ನಾಳ್, ಜಾರಕಿಹೊಳಿ ಬಣ ಪ್ರತ್ಯೇಕವಾಗಿ ಪ್ರತಿಭಟನೆಯ ಅಖಾಡಕ್ಕೆ ಧುಮುಕಿದೆ. ಈ ಸಂಬಂಧ ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಶುಕ್ರವಾರ ಸಭೆ ನಡೆಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ ನೇತೃತ್ವದ ನಾಯಕರ ಗುಂಪು ತುರ್ತು ಸುದ್ದಿಗೋಷ್ಠಿ ನಡೆಸಿದ ಬೆಳವಣಿಗೆ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ರೈತರು ಹಾಗೂ ಮಠ-ಮಾನ್ಯಗಳಿಗೆ ವಕ್ಫ್ ನೋಟಿಸ್ ವಿಷಯಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರದ ವಿರುದ್ಧ ತಾವು ಬೃಹತ್ ಹೋರಾಟ ನಡೆಸುವುದಾಗಿ ಈ ನಾಯಕರು ಘೋಷಿಸಿದ್ದಾರೆ. ವಕ್ಫ್ ವಿರುದ್ಧ ಒಂದು ತಿಂಗಳು ಕಾಲ ಜನಜಾಗೃತಿ ಅಭಿಯಾನ ನಡೆಸುವುದಾಗಿ ಯತ್ನಾಳ್ ಬಣದ ಈ ನಾಯಕರು ಪ್ರಕಟಿಸಿದ್ದಾರೆ. ನವೆಂಬರ್ 25ರಿಂದ ಡಿಸೆಂಬರ್ 25ರವರೆಗೆ ಬೀದರ್‌ನಿಂದ ಬೆಳಗಾವಿ ವರೆಗೆ ಜನ ಜಾಗೃತಿ ಅಭಿಯಾನ ನಡೆಸುವುದಾಗಿ ಯತ್ನಾಳ್ ತಿಳಿಸಿದ್ದಾರೆ.
ಬೀದರ್ ಜಿಲ್ಲೆಯಿಂದ ಪ್ರಾರಂಭವಾಗಿ ಅಭಿಯಾನವು ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ಮೂಲಕ ಸಾಗಲಿದೆ ಎಂದವರು ಮಾಹಿತಿ ಒದಗಿಸಿದ್ದಾರೆ.
1954ರಿಂದ ಆರಂಭವಾದ ಗೆಜೆಟ್ ಆದೇಶವನ್ನು ರದ್ದು ಮಾಡಬೇಕು ಹಾಗೂ ರೈತರು ಜಮೀನು, ಮಠಗಳ ಭೂಮಿ, ಸರ್ಕಾರಿ ಜಾಗಗಳನ್ನು ವಕ್ಫ್ ಮಂಡಳಿ ಖಾಯಂ ಆಗಿ ವಾಪಸ್ ಕೊಡಬೇಕು ಎಂದು ಆಗ್ರಹಿಸಿ ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದ ಯತ್ನಾಳ್, ಈ ಸಂಬಂಧದ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಜಾರಿಗೊಳಿಸಬೇಕೆಂದೂ ಒತ್ತಾಯಿಸಲಾಗುತ್ತಿದೆ ಎಂದು ತಿಳಿಸಿದರು.
ಯಡಿಯೂರಪ್ಪ ಕುಟುಂಬದ ವಿರುದ್ದ ಸಮರ ಸಾರಿರುವ ಈ ಪ್ರಭಾವಿ ಬಣ ಇದೀಗ ವಕ್ಫ್ ವಿವಾದ ವಿರುದ್ದದ ಹೋರಾಟದಲ್ಲಿ ಪಕ್ಷದ ದಂಡನಾಯಕನನ್ನೇ ಹೊರಗಿಟ್ಟು ಅಖಾಡಕ್ಕಿಳಿದಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.