ಬೆಂಗಳೂರು: ಯಾದಗಿರಿಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಪರಶುರಾಮ್ ಸಾವಿನ ಪ್ರಕರಣ ರಾಜ್ಯ ರಾಜಕೀಯ ಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಗಿದೆ. ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಪೊಲೀಸ್ ಅಧಿಕಾರಿ ಬಲಿಯಾಗಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.
ಇದೇ ವೇಳೆ ಮೃತ ಪಿಎಸ್‌ಐ ಪತ್ನಿಗೆ ಸರ್ಕಾರಿ ಕೆಲಸ ಕೊಡಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೃತ ಪಿಎಸ್‌ಐ ಪರಶುರಾಮ್ ಪತ್ನಿಗೆ ಕೆಲಸ ಹಾಗೂ ಪರಿಹಾರ ಕೊಡುವುದಕ್ಕೆ ಸರ್ಕಾರ ತೀರ್ಮಾನ ಮಾಡಿದೆ ಎಂದು ತಿಳಿಸಿದರು.
ಶಾಸಕ ಮೇಲೆ ಆರೋಪ ಕೇಳಿ ಬಂದಿದ್ದು ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದೂ ಅವರು ತಿಳಸಿದರು. ಪರಶುರಾಮ್ ಸಾವಿನ ಪ್ರಕರಣವು ಆತ್ಮಹತ್ಯೆ ಅಲ್ಲ ಎಂದು ಇಲಾಖೆ ಹೇಳಿದೆ. ಅವರು ಯಾವುದೇ ಸೂಸೈಡ್ ನೋಟ್ ಕೂಡಾ ಬರೆದಿಲ್ಲ ಎಂದಿರುವ ಪರಮೇಶ್ವರ್, ಆದರೂ ಆರೋಪ ಕೇಳಿಬಂದಿರಿವ ಹಿನ್ನೆಲೆಯಲ್ಲಿ ಶಾಸಕರ ವಿರುದ್ದ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ಒದಗಿಸಿದರು.


























































