ಉಡುಪಿ: ಬಡವರಿಗೆ ಮನೆಯನ್ನೇ ದಾನ ಮಾಡಿದ ಮಹಾದಾನಿಯ ಕೈಂಕರ್ಯವು ಕರಾವಳಿ ಜಿಲ್ಲೆಗಳಲ್ಲಿ ಭಾರೀ ಸುದ್ದಿಯಾಗುತ್ತಿದೆ. ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿ ಅವರು ನಿರ್ಗತಿಕರಿಗೆ ಮನೆಗಳನ್ನು ದಾನ ಮಾಡುತ್ತಿದ್ದು ಇದೀಗ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಅಪಘಾತದಲ್ಲಿ ಗಾಯಗೊಂಡು ಅಸಹಾಯಕರಾಗಿದ್ದ ಕರಾವಳಿಯ ಹಿಂದೂ ಕಟ್ಟಾಳು ರಾಜು ಮರವಂತೆ ಅವರ ಕುಟುಂಬಕ್ಕೆ ಗೋವಿಂದ ಪೂಜಾರಿಯವರು ಆಸರೆಯಾಗಿದ್ದಾರೆ. ಸುಮಾರು 20 ವರ್ಷಗಳಿಂದ ಹಿಂದೂ ಸಂಘಟನೆಯ ಕಾರ್ಯಕರ್ತರಾಗಿ ಕೆಲಸ ಮಾಡಿರುವ ರಾಜು ಮರವಂತೆ ಅವರು ಇತ್ತೀಚೆಗೆ ಅಪಘಾತದಲ್ಲಿ ಕಾಲಿನ ಸ್ವಾಧೀನ ಕಳೆದುಕೊಂಡರು. ಆ ಸಂದರ್ಭದಲ್ಲಿ ಅವರ ಚಿಕಿತ್ಸೆಗೆ ನೆರವಾಗಿದ್ದಲ್ಲದೆ, ಅವರ ಮನೆಯ ಕನಸಿನ ಬಗ್ಗೆಯೂ ತಿಳಿದುಕೊಂಡರು. ತಾವೇ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದರು. ಇದೀಗ ನುಡಿದಂತೆ ನಡೆದುಕೊಂಡ ಡಾ.ಗೋವಿಂದ ಬಾಬು ಪೂಜಾರಿಯವರು ರಾಜು ಮರವಂತೆಯವರ ಕುಟುಂಬಕ್ಕೆ ಸುಸಜ್ಜಿತ ಮನೆಯನ್ನು ಕಟ್ಟಿಸಿ ಕೊಟ್ಟಿದ್ದಾರೆ. ಇದು ಹಿಂದೂ ಸಂಘಟನೆಗಳ ಪಾಲಿಗೆ ಸಂಭ್ರಮವೆನಿಸಿದೆ.
ಈ ಹಿಂದೆ ಹತ್ತು ಬಡ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿಕೊಟ್ಟಿರುವ ಪೂಜಾರಿ ಇದೀಗ ರಾಜು ಮರವಂತೆ ಅವರಿಗೆ 11ನೇ ಮನೆಯನ್ನು ಸಮರ್ಪಿಸುತ್ತಿದ್ದಾರೆ. ಡಿ.5ರಂದು ಈ ಮನೆಯ ‘ಪ್ರವೇಶ’ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರನ್ನು ಕೇಂದ್ರವಾಗಿಸಿರುವ ಡಾ.ಗೋವಿಂದ ಬಾಬು ಪೂಜಾರಿಯವರು ಆಹಾರೋದ್ದಿಮೆ ಕ್ಷೇತ್ರದ ಉದ್ಯಮಿ. ಉದ್ಯಮದ ಗಳಿಕೆಯ ಕೋಟ್ಯಾಂತರ ರೂಪಾಯಿಗಳನ್ನು ಬಡವರಿಗಾಗಿ ಸಮರ್ಪಿಸುತ್ತಿರುವ ಇವರು, ‘ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್’ ಸ್ಥಾಪಿಸಿ ಆ ಮೂಲಕ ಬಹಳಷ್ಟು ಸಮಾಜಿಕ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಇದೀಗ ಈ ಟ್ರಸ್ಟ್ ಮೂಲಕವೇ ರಾಜು ಮರವಂತೆ ಅವರಿಗಾಗಿ ಮನೆ ಕಟ್ಟಿಸಿಕೊಟ್ಟಿದ್ದಾರೆ.
ಕರಾವಳಿ ಮೂಲದ ಉದ್ಯಮಿ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್ ಸಹಿತ ಹಲವು ರಾಜ್ಯಗಳಲ್ಲಿ ಆಹಾರೋದ್ಯಮ ಕ್ಷೇತ್ರವನ್ನು ಮುನ್ಬಡೆಸುತ್ತಿರುವ ಡಾ.ಗೋವಿಂದ ಪೂಜಾರಿ ಬೆಂಗಳೂರನ್ನು ಕೇಂದ್ರಸ್ಥಾನವಾಗಿಸಿ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿದ್ದಾರೆ.
ಬಾಲ್ಯದಲ್ಲಿ ಬಡತನದ ಬೇಗೆಯಲ್ಲಿದ್ದಾಗ ಗೋವಿಂದ ಬಾಬು ಪೂಜಾರಿ ಮುಂಬೈಗೆ ತೆರಳಿ ಹೊಟೇಲ್ ಉದ್ಯಮದ ಕಾರ್ಮಿಕನಾಗಿ ಕೆಲಸ ಮಾಡಿ, ನಂತರ ತಾನೇ ಉದ್ಯಮ ಸಂಸ್ಥೆ ಕಟ್ಟಿದವರು. ಯಾರೂ ನಿರುದ್ಯೋಗಿಗಳಾಗಿ ಇರಬಾರದು ಎಂಬ ಮನಸ್ಥಿತಿ ಹೊಂದಿರುವ ಡಾ.ಗೋವಿಂದ ಪೂಜಾರಿಯವರು, ತಮ್ಮ ಒಡೆತನದ ChefTalk ಕಂಪನಿಯ ಜೊತೆ ಹಲವಾರು ಸಂಸ್ಥೆಗಳನ್ನು ಹುಟ್ಟು ಹಾಕಿದ್ದಾರೆ. ಸ್ವ ಉದ್ಯೋಗಾಕಾಂಕ್ಷಿಗಳಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಶ್ರೀ ವರಲಕ್ಷ್ಮೀ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಆರಂಭಿಸಿದ್ದಾರೆ. ರಾಜ್ಯವ್ಯಾಪಿ ಸಣ್ಣ ಉದ್ದಿಮೆ ಆರಂಭಿಸುವವರ ಆರ್ಥಿಕ ನೆರವಿಗಾಗಿ ಶ್ರೀ ನಾರಾಯಣ ಗುರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಆರಂಭಿಸಿದ್ದಾರೆ.
ಮತ್ಯೋದ್ಯಮಿಗಳಿಗೆ ಬೆಂಗಾವಲಾಗಿ ಹಾಗೂ ರಾಜ್ಯಾದ್ಯಂತ ಉದ್ಯೋಗ ಸೃಷ್ಟಿಗಾಗಿ ‘ಮತ್ಸ್ಯ ಬಂಧನ’ ಹಾಗೂ ಮೀನಿನ ಖಾದ್ಯಗಳ ತಯಾರಿಕಾ ಘಟಕ ಆರಂಭಿಸಿದ್ದಾರೆ. ಪ್ರವಾಸೋದ್ಯಮ ಕ್ಷೇತ್ರದಲ್ಲೂ ಉದ್ಯೋಗ ಸೃಷ್ಟಿಸಬಹುದೆಂಬುದನ್ನು ಮನಗಂಡ ಡಾ.ಪೂಜಾರಿಯವರು ರೆಸಾರ್ಟ್ ಹಾಗೂ ಹಾಸ್ಪಿಟಾಲಿಟಿ ಉದ್ಯಮಕ್ಕೂ ಕೈ ಹಾಕಿದ್ದಾರೆ. ಸೈನಿಕರಾಗಲು ಬಯಸುವ ಯುವಕರಿಗೆ ಸೂಕ್ತ ತರಬೇತಿ ನೀಡಲು ಬೈಂದೂರಿನ ಯುವ ಸೈನಿಕ ಪ್ರಶಾಂತ್ ದೇವಾಡಿಗ ನೇತೃತ್ವದ ನೇಶನ್ ಲವರ್ಸ್ ಟೀಮ್‌ನ ಗೌರವಾಧ್ಯಕ್ಷರಾಗಿಯೂ ಇವರು ಕಾರ್ಯಕೇಂದ್ರೀಕರಿಸಿದ್ದಾರೆ.
ಅಷ್ಟೇ ಅಲ್ಲ, ವಿದ್ಯುನ್ಮಾನ ಹಾಗೂ ಶಿಕ್ಷಣ ಕ್ಷೇತ್ರಕ್ಕೂ ಸೇವೆಯನ್ನು ವಿಸ್ತರಿಸಿ 10 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡುವ ಪ್ರಯತ್ನ ಇವರದ್ದು. ಜೊತೆಗೆ ಸಾವಿರಾರು ಕುಟುಂಬಗಳಿಗೆ ಜೀವಜಲ, ಅನ್ನ, ಆಹಾರ, ವೈದ್ಯಕೀಯ ಶಿಕ್ಷಣ ನೀಡಿದ ಸಾಧನೆ ಇವರದ್ದು. ಈ ಅನನ್ಯ, ಅಪೂರ್ವ ಸೇವೆಗಾಗಿಯೇ ಏಷ್ಯಾದ ಪ್ರತಿಷ್ಠಿತ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಅತ್ಯುನ್ನತ ಪುರಸ್ಕಾರ ನೀಡಿ ಗೌರವಿಸಿದೆ.