ಬೇಸಿಗೆ ಆರಂಭದಲ್ಲೇ ನೀರಿಗಾಗಿ ಹಾಹಾಕಾರ.. ರಸ್ತೆಗೆ ಇಳಿದು ಬಿಂದಿಗೆ ಹಿಡಿದು ಪ್ರತಿಭಟಿಸಿದ ಜನ.. ಅಧಿಕಾರಿಗಳ, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ..
ಗದಗ: ಸರ್ಕಾರ ಕುಡಿಯುವ ನೀರಿನ ಯೋಜನೆಗೆ ಕೋಟಿ ಕೋಟಿ ಖರ್ಚು ಮಾಡಿದ್ರೂ ಪ್ರಯೋಜನವಿಲ್ಲದಂತಾಗಿದೆ. ಬೇಸಿಗೆ ಆರಂಭದಲ್ಲೇ ಗದಗ-ಬೆಟಗೇರಿ ಅವಳಿ ನಗರದಲ್ಲಿ ಹನಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದ್ರೂ ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ ಆಡಳಿತ ವ್ಯವಸ್ಥೆ ವರಸೆಗೆ ರೋಸಿಹೋದ ಹುಡ್ಕೋ ಬಡಾವಣೆಯ ನಿವಾಸಿಗಳು ರೊಚ್ಚಿಗೆದ್ದಿದ್ರು. ಅದ್ರಲ್ಲೂ 85 ವರ್ಷದ ಅಜ್ಜಿಯ ರೋಷವೇಷ ಮಾತ್ರ ಬಡಾವಣೆಯ ಜನ್ರನ್ನೇ ಬೆಚ್ಚಿಬಿಳಿಸಿತ್ತು. ಇಂಥ ಇಳಿವಯಸ್ಸಿನಲ್ಲಿ ನೀರಿಗಾಗಿ ಪರದಾಡಿದ ಅಜ್ಜಿಯ ನೋವು ಮಾತ್ರ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.
ಗದಗ-ಬೆಟಗೇರಿ ಅವಳಿ ನಗರದಲ್ಲಿ ಸರ್ಕಾರ ಕೋಟ್ಯಾಂತರ ಹಣ ಖರ್ಚು ಮಾಡಿ 24/7 ಯೋಜನೆ ಜಾರಿ ಮಾಡಿದೆ. ಆದ್ರೆ, 24/7 ಅಲ್ಲ ವಾರಕ್ಕೆ ಒಂದು ಬಾರಿಯೂ ನಲ್ಲಿಯಲ್ಲಿ ನೀರು ಬರ್ತಾಯಿಲ್ಲ ಅಂತ ಜನ್ರು ಕಿಡಿಕಾರಿದ್ದಾರೆ. ಹತ್ತಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದ್ರೂ ಪ್ರಯೋಜನವಾಗಿಲ್ಲ. ಹೀಗಾಗಿ ರೊಚ್ಚಿಗೆದ್ದ ಈ ಬಡಾವಣೆ ಜನ್ರು ಇವತ್ತು ಮಹಿಳೆಯರು, ಅಜ್ಜ, ಅಜ್ಜಿಯರು, ಮಕ್ಕಳ ಸಮೇತ ಬೀದಿಗೀಳಿದರು. ನಗರಸಭೆ, ಜಿಲ್ಲಾಡಳಿತ ವಿರುದ್ದ ಹಿಡಿಶಾಪ ಹಾಕಿದರು.
ಗದಗ ಜಿಲ್ಲೆಯ ಆಡಳಿತ ವ್ಯವಸ್ಥೆ ಎಲ್ಲಿಗೆ ಬಂದಿದೆ ಅನ್ನೋದು ಗೋತ್ತಾಗುತ್ತೆ. ತುಂಗಭದ್ರಾ ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿದ್ರೂ ಅವಳಿ ನಗರದಕ್ಕೆ ನೀರು ಪೂರೈಕೆ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಹಮ್ಮಿಗೆ ಬ್ಯಾರೇಜ್ ನಿಂದ ಗದಗ-ಬೆಟಗೇರಿ ಅವಳಿ ನಗರಕ್ಕೆ ನೀರು ಪೂರೈಕೆ ಆಗುತ್ತೆ. ಆದ್ರೆ, ನೀರು ಪೂರೈಕೆಯ ಪೈಪ್ ಸಾಕಷ್ಟು ಕಡೆ ಒಡೆದು ನೀರು ಪೋಲಾಗುತ್ತಿದೆ. ಇದನ್ನು ತಡೆಯುವ ಗಂಭೀರ ಚಿಂತನೆ ನಗರಸಭೆ ಮಾಡುತ್ತಿಲ್ಲ. ಹೀಗಾಗಿಯೇ ಅವಳಿ ನಗರದಲ್ಲಿ ನೀರಿಗಾಗಿ ಹಾಹಾಕಾರ ಹೆಚ್ಚಾಗಿದೆ. ಅದ್ರಲ್ಲೂ ಹುಡ್ಕೋ ಬಡಾವಣೆ ನಿರ್ಮಾಣವಾಗಿ 30ವರ್ಷ ಕಳೆದಿದೆ. ಅವಳಿ ನಗರದಲ್ಲೇ ಶೇಕಡಾ 100 ರಷ್ಟು ತೆರಿಗೆ ತುಂಬೋ ಜನ್ರು ಇವ್ರೇ. ಆದ್ರೆ, ಇಲ್ಲಿನ ಜನ್ರಿಗೆ ಮಾತ್ರ ನಗರಸಭೆ ಯಾವುದೇ ಸೌಲಭ್ಯ ನೀಡಿಲ್ಲ ಅಂತ ಕಿಡಿಕಾರಿದ್ದಾರೆ. ಕುಡಿಯುವ ನೀರು, ರಸ್ತೆ, ಚರಂಡಿ ಹೀಗೆ ಮೂಲಭೂತ ಸೌಕರ್ಯ ಇಲ್ಲದೇ ಜನ್ರು ಪರದಾಡುತ್ತಿದ್ದಾರೆ. ಜನ್ರ ರೋಷಾವೇಶಕ್ಕೆ ಥರಗುಟ್ಟಿದ ನಗರಸಭೆ ಅಧಿಕಾರಿಗಳು ಓಡೋಡಿ ಹುಡ್ಕೋ ಬಡಾವಣೆಗೆ ದೌಡಾಯಿಸಿದ್ದಾರೆ. ಅಧಿಕಾರಿಗಳು ಬರ್ತಾಯಿದ್ದಂತೆ ಸಿಟ್ಟಿಗೆದ್ದ ಜನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ್ರು. ಈ ಬಗ್ಗೆ ನಗರಸಭೆ ಆಯುಕ್ತ ರಮೇಶ್ ಜಾಧವ್ ಅವರನ್ನು ಕೇಳಿದ್ರೆ, ಸಮಸ್ಯೆ ಇರೋದು ನಿಜ. ನಾಳೆಯೊಳಗೆ ಕುಡಿಯುವ ನೀರಿನ ಸಮಸ್ಯೆಗೆ ಕ್ರಮ ಕಗೊಳ್ಳವುದಾಗಿ ಹೇಳಿದ್ದಾರೆ.
ಬೆಳಗ್ಗೆಯೇ ಮಹಿಳೆಯರು, ಮಕ್ಕಳು ಖಾಲಿ ಕೊಡಗಳೊಂದಿಗೆ ಬೀದಿಗೀಳಿದು ಅಧಿಕಾರಿಗಳಿಗೆ ಹಾಗೂ ಜನ ಪ್ರತಿನಿಧಿಗಳಿಗೆ ಬಿಸಿ ತಟ್ಟಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಎರಡು, ಮೂರು ತಿಂಗಳಿಗೊಮ್ಮೆ ನೀರು ಪೂರೈಕೆ ಆಗುತ್ತಿತ್ತು. ಆಗ ಅವಳಿ ನಗರದಲ್ಲೆಲ್ಲಾ ಹೋರಾಟ, ಪ್ರತಿಭಟನೆಯ ಅಬ್ಬರ ಜೋರಾಗಿತ್ತು. ಹೀಗಾಗಿ ಈಗಿನ ಸ್ಥಿತಿ ನೋಡಿದ್ರೆ ಎಲ್ಲಿ ಮತ್ತೆ ಆ ಪರಿಸ್ಥಿತಿ ಬರುತ್ತಾ ಅನ್ನೋದು ಆತಂಕ, ಭಯ ಅವಳಿ ನಗರದ ಜನ್ರಲ್ಲಿ ಮೂಡಿದೆ. ಇನ್ನಾದ್ರೂ ಜಿಲ್ಲಾಡಳಿತ, ನಗರಸಭೆ ಎಚ್ಚೆತ್ತುಕೊಂಡು ಸಮರ್ಪಕ ಕುಡಿಯು ನೀರು ಪೂರೈಕೆ ಮಾಡಿ ರಣಬಿಸಿಲಿನಲ್ಲಿ ಬೆಂದ ಜನ್ರ ಹೊಟ್ಟೆ ತಣ್ಣಗೆ ಮಾಡುತ್ತಾ ಅನ್ನೋದು ಕಾದು ನೋಡಬೇಕಿದೆ.