ಗದಗ: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಉಗಳವಾಟ ಗ್ರಾಮದಲ್ಲಿ ಕುರಿಗಾಹಿಯ ಕತ್ತು ಕತ್ತರಿಸಿ ಹತ್ಯೆ ಮಾಡಿರುವದನ್ನು ಖಂಡಿಸಿ, ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ಕುರುಬ ಸಮಾಜದ ಮಹಿಳಾ ಪಿ.ಡಿ.ಓ ಮೇಲೆ ಹಲ್ಲೆಮತ್ತು ಕಲಬುರಗಿ ಜಿಲ್ಲೆಯ ಅಳಂದ ತಾಲ್ಲೂಕಿನ ಖಾನಾಪುರ ಗ್ರಾಮದಲ್ಲಿ ಕುರುಬರಿಗೆ ಬಹಿಷ್ಕಾರ ಹಾಕಿರುವದನ್ನು ಖಂಡಿಸಿ ಗದಗ ಜಿಲ್ಲೆಯ ಕುರುಬ ಸಮುದಾಯದ ವಿವಿಧ ಸಂಘಟನೆಗಳು ಹಾಗೂ ಜಿಲ್ಲಾ ಕುರಿಗಾರರ ಸಹಕಾರಿ ಸಂಘಗಳ ಒಕ್ಕೂಟದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ.
ಗದಗ ನಗರದ ಟಿಪ್ಪು ವೃತ್ತದಿಂದ ಕುರುಬ ಸಮಾಜ ಬಾಂಧವರು ನೂರಾರು ಕುರಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿವರೆಗೂ ತೆರಳಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
‘UDAYA NEWS’
ಇಂಗ್ಲಿಷ್ ಆವೃತ್ತಿಯಲ್ಲೂ ಲಭ್ಯ

ಬಾಗಲಕೋಟೆ ಜಿಲ್ಲೆ, ಬಾದಾಮಿ ತಾಲ್ಲೂಕು, ಉಗಲವಾಟ ಗ್ರಾಮದಲ್ಲಿ ಕುರಿಗಾಹಿ ಯುವಕ ಶರಣಪ್ಪ ಜಮ್ಮನಕಟ್ಟಿಯ ಮೇಲೆ ದುಷ್ಕರ್ಮಿಗಳು ರಾಕ್ಷಸಿಕೃತ್ಯ ಮೆರೆದು ಕತ್ತು ಸೀಳಿ ಕೊಂದು ಹಾಕಿದ್ದಾರೆ. ಒಂದೇ ತಿಂಗಳಿನಲ್ಲಿ ಮೂರು ಪ್ರಕರಣಗಳು ನಡೆದಿವೆ.
ಬಾಗಲಕೋಟೆ ಜಿಲ್ಲೆ ಮಾತ್ರವಲ್ಲದೇ ರಾಜ್ಯಾದ್ಯಂತ ಕುರಿಗಾಹಿಗಳು ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಮಳೆ, ಗಾಳಿ, ಬಿಸಿಲೆನ್ನದೇ ಊರೂರು ಸುತ್ತುವ ಪ್ರಕೃತಿಯ ಮಡಿಲಿನಲ್ಲಿ ಪ್ರಕೃತಿಯ ಆರಾಧಕರಾಗಿರುವ ಕುರಿಗಾಹಿಗಳಿಗೆ ರಕ್ಷಣೆಯಿಲ್ಲದಂತಾಗಿದೆ. ಅರಣ್ಯ ಇಲಾಖೆಯವರ ಮಾನಸಿಕ, ದೈಹಿಕ ಹಿಂಸೆಗಳು ಜೊತೆಗೆ ಕಳ್ಳಕಾಕರಿಂದ ಕುರಿಗಳನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆಯ ಜೊತೆ ಕೊಲೆಗಾರರು ನಿರ್ದಯಿಗಳಾಗಿ ಕತ್ತು ಸೀಳಿ ಕೊಂದು ಹಾಕುತ್ತಿದ್ದಾರೆ ಎಂದು ಸರ್ಕಾರದ ಗಮನಸೆಳೆದಿದ್ದಾರೆ.
ಸರ್ಕಾರ ಬಜೆಟ್‌ನಲ್ಲಿ ಕುರಿಗಾರರಿಗೆ ಘೋಷಣೆಗಳನ್ನು ಮಾಡುತ್ತಿವೆಯಾದರೂ ಕುರಿಗಾರರಿಗೆ ಅನುಕೂಲಗಳು ಮರೀಚಿಕೆಯಾಗಿವೆ. ಸರ್ಕಾರ ಕಾಯಿದೆಗಳನ್ನು ಮಾಡಿವೆ. ಬಂದೂಕು ಲೈಸನ್ಸ್ ಬಗ್ಗೆ ಘೋಷಣೆ ಮಾಡಿದೆ ಆದರೆ ಯಾವುದೂ ಸಹ ಕಾರ್ಯರೂಪಕ್ಕೆ ಬರುತ್ತಿಲ್ಲ. ಕುರಿಗಾಹಿಗಳು ದೇಶದ ಆವಿಭಾಜ್ಯ ಅಂಗವಾಗಿದ್ದು, ಅವರ ಜೀವನೋಪಾಯ ಮತ್ತು ಸುರಕ್ಷತೆಗೆ ರಾಜ್ಯ ಸರ್ಕಾರದ ತುರ್ತು ಗಮನ ನೀಡಬೇಕಿದೆ ಎಂದು ಆಗ್ರಹಿಸಿದ್ದಾರೆ.