ಗದಗ: ಗದಗ್‌ನ ಶ್ರೀಹರ್ಷಾ ಪುಟಾಣಿ ಬಾಲಕನಿಗೆ ಇನ್ನೂ ಕೂಡ ಸರಿಯಾಗಿ ಓಡಾಡೋಕ್ಕೆ ಬರಲ್ಲ. ಶಾಲೆಗೆ ಹೋಗೋ ವಯಸ್ಸೂ ಆಗಿಲ್ಲ. ಆದರೆಈ ಪುಟ್ಟ ಪೋರನ ನೆನಪಿನ ಶಕ್ತಿಗೆ ಎಂಥವರು ಬೆರಗಾಗ್ತಾರೆ. ಅಷ್ಟೇ ಅಲ್ಲ, ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಎಲ್ರೂ ಹುಬ್ಬೇರಿಸುವಂಥ ಸಾಧನೆ ಪಟ್ಟಿಯಲ್ಲಿ ಸೇರಿದ್ದಾನೆ.
ಗದಗ ನಗರದ ರಾಜೀವ ಗಾಂಧಿ ನಗರದ ನಿವಾಸಿಗಳಾದ ಪ್ರಮೋದ ಕುಲಕರ್ಣಿ ಹಾಗೂ ಪಲ್ಲವಿ ಕುಲಕರ್ಣಿ ದಂಪತಿಗಳ ಸುಪುತ್ರ. ಈತನಿಗೆ ಮೂರು ವರ್ಷ. ಈ ಬಾಲಕನಿಗೆ ಕೂಡ ಸ್ಕೂಲ್ ಸೇರೋ ವಯಸ್ಸಂತು ಖಂಡಿತ ಆಗಿಲ್ಲ. ಆದರೆ ನರ್ಸರಿ ಸ್ಕೂಲ್, ಯು ಕೆಜಿ- ಎಲ್ ಕೆಜಿ ಯಲ್ಲಿ ಏನೆಲ್ಲ ಕಲಿಬೇಕೋ ಅವೆಲ್ಲವನ್ನೂ ಈತ ಈಗಲೇ ಕಲಿತು ಗಮನಸೆಳೆದಿದ್ದಾನೆ..
ಈತನ ವಯಸ್ಸಿನ ಮಕ್ಕಳಿಗೆ ಹೋಲಿಸಿದರೆ ಈ ಹುಡುಗ ಕೊಂಚ ವಿಭಿನ್ನವಾಗಿದ್ದಾನೆ. ಮೇಲಾಗಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಬರೀ ಆಟದ ಲೋಕದಲ್ಲಿ ಇರಬೇಕಾಗಿದ್ದ ಈತ, ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸೇರಿಕೊಂಡಿದ್ದಾನೆ. ಈತನ ಅಗಾಧವಾದ ನೆನಪಿನ ಶಕ್ತಿ ಹಾಗೂ ತಂದೆ-ತಾಯಿಯರ ಪ್ರೇರಣೆಯಿಂದ ಏಪ್ರಿಲ್ 12 ,2021 ರಂದು ಇಂಡಿಯ ಬುಕ್ ಅಫ್ ರೆಕಾರ್ಡ್ಸ್‌ನವರು ಆನ್‌ಲೈನ್‌ನಲ್ಲಿ ನಡೆಸಿದ ಟ್ಯಾಲೆಂಟ್ ಸರ್ಚ್ ಕಾರ್ಯಕ್ರಮದಲ್ಲಿ ಶ್ರೀಹರ್ಷ ಕುಲಕರ್ಣಿ ಕೂಡ ಭಾಗವಹಿಸಿದ್ದ. ಈತ ತೋರಿದ ಪ್ರತಿಭೆಯನ್ನು ಕಂಡು, ಹಾಗೂ ಈತನ ಅಗಾಧ ನೆನಪಿನ ಶಕ್ತಿಗೆ ಮೆಚ್ಚಿ ಇಂಡಿಯಾ ಬುಕ್ ಅಫ್ ರೆಕಾರ್ಡ್ಸ್ ಸಂಸ್ಥೆಯವರು ಪ್ರೋತ್ಸಾಹದ ರೂಪದಲ್ಲಿ ಮೇ 21 ರ 2021 ರಂದು, ಅಪ್ರಿಸಿಯೇಶನ್ ಸರ್ಟಿಫಿಕೇಟ್, ಮತ್ತು ಮೆಡಲ್ ಒಂದನ್ನು ಕಳಿಸುವ ಜೊತೆಗೆ ತಮ್ಮ ರೆಕಾರ್ಡ್ ಬುಕ್ ನಲ್ಲಿ ಇತನ ಹೆಸರನ್ನೂ ಸೇರಿಸಿಕೊಂಡಿದ್ದಾರೆ.
ಇದಕ್ಕೆಲ್ಲ ಕಾರಣ ಈತನ ಸಹೋದರಿ ಶ್ರೀರಕ್ಷಾ. ಶ್ರೀರಕ್ಷಾ ಸದ್ಯ ಯುಕೆಜಿ ತರಗತೀಲಿ ಅಭ್ಯಾಸ ಮಾಡ್ತಿದ್ದು, ಇವಳಿಗೆ ಹೇಳೋ ಮನೆಪಾಠವೇ ಈ ಪೋರನಿಗೆ ಸ್ಪೂರ್ತಿಯಾಗಿದೆ. ಶ್ರಿಹರ್ಷಾ ಳಿಗೆ ಹೇಳೋ ಮನೆಪಾಠವನ್ನೆಲ್ಲ ಈತ ಲಕ್ಷ್ಯವಿಟ್ಟು ಕೇಳುತ್ತಾನೆ. ಒಮ್ಮೆ ಹೀಗೆ ಗಮನವಿಟ್ಟು ಕೇಳಿದ ಪಾಠವನ್ನ ಈತನ ಸಹೋದರಿ ಶ್ರೀರಕ್ಷಾ ಹೇಳ್ತಾಳೋ ಗೊತ್ತಿಲ್ಲ. ಆದ್ರೆ ಪುಟಾಣಿ ಶ್ರೀಹರ್ಷಾ ಅಂತು ಪಟ ಪಟಿಸೋಕೆ ಸಿದ್ಧವಾಗಿ ನಿಂತಿರ್ತಾನೆ.
ಶ್ರೀಹರ್ಷನ ತಂದೆ ವೃತ್ತಿಯಲ್ಲಿ ಸರಕಾರಿ ನೌಕರರಾಗಿದ್ದಾರೆ. ತಾಯಿ ಮನೆಯಲ್ಲೇ ಇರೋದ್ರಿಂದ ಮಕ್ಕಳಿಗೆ ಶಾಲೆಯಷ್ಟೆ ಪರಿಪೂರ್ಣವಾಗಿ ಶಿಕ್ಷಣ ನೀಡ್ತಿದ್ದಾರೆ. ಮಗಳಿಗೆ ನೀಡಿದ ಶಿಕ್ಷಣ ಪುಟಾಣಿ ಪೋರನಿಗೆ ವರದಾನವಾಗಿದೆ. ಇಂಗ್ಲೀಷ್, ಗಣೀತ, ವಿಜ್ಞಾನ ಈ ಮೂರು ವಿಷಯಗಳ ಗುರುತಿಸುವಿಕೆಯಲ್ಲಿ ಶ್ರೀಹರ್ಷಾ ಪ್ರಾವಿಣ್ಯತೆ ಹೊಂದಿದ್ದು 13 ಬಣ್ಣಗಳು,13 ಪಕ್ಷಿಗಳು, 12 ಹೂವುಗಳು, 10 ಸಾಕುಪ್ರಾಣಿಗಳು, 18 ದೇಹದ ಭಾಗಗಳು,20 ಹಣ್ಣುಗಳು, 8 ಕೀಟಗಳು, 8 ಜನ ನಮ್ಮ ಸಹಾಯಕರುಗಳು, 9 ಸಮುದ್ರ ಪ್ರಾಣಿಗಳು, ಕನ್ನಡ ವರ್ಣಮಾಲೆ,16 ಆಕೃತಿಗಳು,7 ಆಹಾರ ಪದಾರ್ಥಗಳು, 19 ತರಕಾರಿಗಳು, ಇಂಗ್ಲಿಷ್ ಅಲ್ಫಾಬೆಟ್ಸ್, ಸಂಖ್ಯೆಗಳು, ಹಿಂದೂ ಪಂಚಾಂಗದ ಪ್ರಕಾರ ಎಲ್ಲಾ ತಿಂಗಳುಗಳು, 21 ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಉತ್ತರ ನೀಡುತ್ತಾನೆ. ಚಿಕ್ಕ ವಯಸ್ಸಿನಲ್ಲೇ ಈ ವಿಶಿಷ್ಠ ನೆನಪಿನ ಶಕ್ತಿ ಹೊಂದಿರೋ ಪುಟಾಣಿಗೆ ಸ್ಥಳಿಯರು ಸಹ ಫಿದಾ ಆಗಿದ್ದಾರೆ.
ಮಕ್ಕಳಿಗೆ ಗ್ರಹಿಸುವ ಶಕ್ತಿ ತುಂಬಾ ಅಪಾರವಾಗಿರುತ್ತೆ. ಮನೆಯಲ್ಲಿ ಹಿರಿಯರು ಮೊಬೈಲ್ ಹಿಡಿದರೆ ಮಕ್ಕಳೂ ಕೂಡ ಮೊಬೈಲ್ ಹಿಡಿತಾವೆ. ಪುಸ್ತಕ ಹಿಡಿದರೆ ಅವ್ರೂ ಸಹ ಪುಸ್ತಕ ಹಿಡಿತಾರೆ. ಹೀಗಾಗಿ ಮನೆಯೇ ಮೊದಲ ಪಾಠಶಾಲೆಯಾದಲ್ಲಿ, ಪ್ರತಿ ಕುಟುಂಬದ ಮಕ್ಕಳೂ ಸಹ ವಿಶಿಷ್ಟ ಪ್ರತಿಭೆ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ ಸೇರುವಲ್ಲಿ ಯಾವ ಸಂಶಯವೂ ಇಲ್ಲ.